ಸಿಪಿಎಲ್ 2020- ನಿಕೊಲಾಸ್ ಪೂರನ್ ಬಿರುಗಾಳಿ ಆಟಕ್ಕೆ ತತ್ತರಿಸಿದ ಸೇಂಟ್ಸ್ ಕಿಟ್ಸ್ – ಗಯಾನ ವಾರಿಯರ್ಸ್‍ಗೆ ಭರ್ಜರಿ ಜಯ
ಕೆರೆಬಿಯನ್ ಪ್ರೀಮಿಯರ್ ಲೀಗ್‍ನ 20ನೇ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಏಳು ವಿಕೆಟ್ ಗಳಿಂದ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪೆಟ್ರಿಯೋಟ್ಸ್ ತಂಡವನ್ನು ಸೋಲಿಸಿತ್ತು. ನಿಕೋಲಾಸ್ ಪೂರನ್ ಅವರ ಅಮೋಘ ಶತಕದ ನೆರವಿನಿಂದ ಗಯಾನ ವಾರಿಯರ್ಸ್ ತಂಡ ಸುಲಭವಾಗಿ ಗೆಲುವಿನ ದಡ ಸೇರಿತ್ತು.
ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ಟಾಸ್ ಗೆದ್ದ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಸೇಂಟ್ ಕಿಟ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿದ್ರೂ ತಂಡಕ್ಕೆ ಜೋಶುವಾ ಡ ಸಿಲ್ವಾ (ಆಕರ್ಷಕ 59 ರನ್) ಹಾಗೂ ದಿನೇಶ್ ರಾಮ್‍ದಿನ್ (39 ರನ್) ಆಧಾರವಾದ್ರು. ಪರಿಣಾಮ ಸೇಂಟ್ ಕಿಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 150 ರನ್ ದಾಖಲಿಸಿತ್ತು.
ಗೆಲ್ಲಲು 151 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಗಯಾನ ವಾರಿಯರ್ಸ್ ತಂಡಕ್ಕೆ ಸೇಂಟ್ ಕಿಟ್ಸ್ ಬೌಲರ್ ಗಳ ಶಾಕ್ ಮೇಲೆ ಶಾಕ್
ನೀಡಿದ್ರು. 25 ರನ್ ಗಳಿಸುವಷ್ಟರಲ್ಲಿ ತಂಡದ ಮೂವರು ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ಹಾದಿ ಹಿಡಿದಿದ್ರು. ನಂತರ ಏಕಾಂಗಿ ಹೋರಾಟ ನಡೆಸಿದ್ದ ನಿಕೊಲಾಸ್ ಪೂರನ್ ಅವರು ಬಿರುಗಾಳಿಯಂತೆ ಬ್ಯಾಟ್ ಬೀಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳ ಸುರಿಮಳೆಗೈದ ಪೂರನ್ ಸೇಂಟ್ ಕಿಟ್ಸ್ ತಂಡಕ್ಕೆ ಕಂಟಕವಾಗಿ ಕಾಡಿದ್ರು. ಕೇವಲ 45 ಎಸೆತಗಳಲ್ಲಿ 10 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳ ಸಹಾಯದಿಂದ ಬಿರುಸಿನ ಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದ್ರು. ಪೂರನ್ ಅವರಿಗೆ ರಾಸ್ ಟೇಲರ್ ಸಾಥ್ ನೀಡಿದ್ರು. ಪೂರನ್ ಅಜೇಯ 100 ರನ್ ಗಳಿಸಿದ್ರೆ, ರಾಸ್ ಟೇಲರ್ ಅಜೇಯ 25 ರನ್ ದಾಖಲಿಸಿದ್ರು. ಭರ್ಜರಿ ಶತಕ ಸಿಡಿಸಿದ ನಿಕೊಲಾಸ್ ಪೂರನ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ಈ ಗೆಲುವಿನ ಮೂಲಕ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಹಾಗೂ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿ ಒಟ್ಟು ಆರು ಅಂಕಗಳನ್ನು ಪಡೆದುಕೊಂಡಿದೆ. ಇನ್ನೊಂದೆಡೆ ಸೇಂಟ್ ಕಿಟ್ಸ್ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ ಒಂದು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.








