ಸಿಪಿಎಲ್ 2020- ಜಮೈಕಾ ತಲೈವಾಸ್ – ಸೇಂಟ್ ಕಿಟ್ಸ್ ಪಂದ್ಯಕ್ಕೆ ಅಡ್ಡಿಪಡಿಸಿದ ಮಳೆರಾಯ
ಕೆರೆಬಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ನ 25ನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದಿದ್ದ ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ. ಹೀಗಾಗಿ ಜಮೈಕಾ ತಲೈವಾಸ್ ಮತ್ತು ಸೇಂಟ್ ಕೀಟ್ಸ್ ನೇವಿಸ್ ಪೆಟ್ರಿಯೋಟ್ಸ್ ತಂಡಗಳು ತಲಾ ಒಂದೊಂದು ಅಂಕಗಳಿಗೆ ಸಮಾಧಾನಪಟ್ಟುಕೊಂಡವು.
ಟಾಸ್ ಗೆದ್ದ ಜಮೈಕಾ ತಲೈವಾಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಸೋತ ಸೇಂಟ್ ಕಿಟ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಸೇಂಟ್ ಕಿಟ್ಸ್ ತಂಡ ಉತ್ತಮ ಆರಂಭವನ್ನು ಕೂಡ ಪಡೆದುಕೊಂಡಿತ್ತು. ಆದ್ರೆ ಪಂದ್ಯದ 5.4ನೇ ಓವರ್ ವೇಳೆ ಮಳೆ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿತ್ತು. ಆಗ ಸೇಂಟ್ ಕಿಟ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿತ್ತು. ಆರಂಭಿಕರಾದ ಲೂಯಿಸ್ ಅಜೇಯ 21 ರನ್ ಹಾಗೂ ಲಿನ್ ಅಜೇಯ 23 ರನ್ ದಾಖಲಿಸಿದ್ರು.
ಈ ಬಾರಿಯ ಟೂರ್ನಿಯಲ್ಲಿ ಕಳೆಪೆ ಆಟವನ್ನಾಡಿರುವ ಸೇಂಟ್ ಕಿಟ್ಸ್ -ನೆವಿಸ್ ಪೆಟ್ರಿಯೋಟ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ ಜಯ ಗಳಿಸಿದ್ದು ಒಂದು ಪಂದ್ಯದಲ್ಲಿ ಮಾತ್ರ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಸೇಂಟ್ ಕಿಟ್ಸ್ ತಂಡ ಮೂರು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನು ಜಮೈಕಾ ತಲೈವಾಸ್ ತಂಡ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆಡಿರುವ ಎಂಟು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಜಮೈಕಾ ತಲೈವಾಸ್, ನಾಲ್ಕು ಸೋಲಿನೊಂದಿಗೆ ಒಟ್ಟು ಏಳು ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಗ್ರ ಸ್ಥಾನ ಪಡೆದುಕೊಂಡಿದೆ.