ಸಿಪಿಎಲ್ 2020 – ಸತತ ಮೂರನೇ ಗೆಲುವು ಸಾಧಿಸಿದ ಟ್ರಿಂಬಾಗೋ ನೈಟ್ ರೈಡರ್ಸ್ – ಬಾರ್ಬೊಡಸ್ ತಂಡಕ್ಕೆ ಮತ್ತೊಂದು ಸೋಲು
ಎಂಟನೇ ಆವೃತ್ತಿಯ ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ಸತತ ಮೂರನೇ ಗೆಲುವು ದಾಖಲಿಸಿದೆ. ಟೂರ್ನಿಯ 9ನೇ ಪಂದ್ಯದಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ 19 ರನ್ ಗಳಿಂದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡವನ್ನು ಪರಾಭವಗೊಳಿಸಿತ್ತು.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ಟಾಸ್ ಗೆದ್ದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದ್ರೆ ನೈಟ್ ರೈಡರ್ಸ್ ತಂಡ ಬಾರ್ಬೊಡಸ್ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಿತ್ತು. ಆರಂಭದಲ್ಲಿ ಬಾರ್ಬೊಡಸ್ ತಂಡ ಮೇಲುಗೈ ಸಾಧಿಸಿದ್ರೂ ಕೊನೆಯ ಎಂಟು ಓವರ್ ಗಳಲ್ಲಿ ನೈಟ್ ರೈಡರ್ಸ್ ತಂಡ ಅಬ್ಬರದ ಬ್ಯಾಟಿಂಗ್ ನಡೆಸಿತ್ತು. ಆರಂಭದಲ್ಲಿ ಲೆಂಡ್ಲಿ ಸಿಮೋನ್ 22 ರನ್ ಸಿಡಿಸಿದ್ರೆ, ಸುನೀಲ್ ನರೇನ್ 8 ರನ್ ಗಳಿಸಿದ್ರು. ಬಳಿ ಕಾಲಿನ್ ಮುನ್ರೊ ಬಿರುಸಿನ 50 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ನಂತರ ಡರೇನ್ ಬ್ರೊವೊ ಮತ್ತು ಕಿರಾನ್ ಪೊಲಾರ್ಡ್ ಬಿರುಗಾಳಿಯಂತೆ ಬ್ಯಾಟ್ ಬೀಸಿದ್ರು. ಡರೇನ್ ಬ್ರೆವೋ 30 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ ಅಜೇಯ 54 ರನ್ ದಾಖಲಿಸಿದ್ರು. ಮತ್ತೊಂದೆಡೆ ಪೊಲಾರ್ಡ್ ಕೇವಲ 17 ಎಸೆತಗಳಲ್ಲಿ 1 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ನೆರವಿನಿಂದ ಅಜೇಯ 41 ರನ್ ಸಿಡಿಸಿದ್ರು. ಅಂತಿಮವಾಗಿ ಟ್ರಿಂಬಾಗೋ ನೈಟ್ ರೈಡರ್ಸ್ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತ್ತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತ್ತು. ಜಾನ್ಸನ್ ಚಾರೀಸ್ 33 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ನೆರವಿನಿಂದ ಆಕರ್ಷಕ 52 ರನ್ ಗಳಿಸಿದ್ರು. ಇನ್ನೊಂದೆಡೆ ಶಾಯ್ ಹೋಪ್ ತಾಳ್ಮೆಯ ಆಟವನ್ನಾಡುತ್ತಿದ್ರು. ಮೊದಲ ವಿಕೆಟ್ ಕಳೆದುಕೊಂಡ ನಂತರ ಕೋರಿ ಆಂಡರ್ಸನ್ 2 ರನ್ ಹಾಗೂ ಕೈಲ್ ಮೇಯರ್ಸ್ 1 ರನ್ ಮತ್ತು ಜೋನಾಥನ್ ಕಾರ್ಟರ್ ಎಂಟು ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಬಳಿಕ ನಾಯಕ ಜೇಸನ್ ಹೋಲ್ಡರ್ ಶಾಯ್ ಹೋಪ್ಗೆ ಸಾಥ್ ನೀಡಿದ್ರು. ಈ ಹಂತದಲ್ಲಿ ಶಾಯ್ ಹೋಪ್ 36 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ನಂತರ ಜೇಸನ್ ಹೋಲ್ಡರ್ ಗೆಲುವಿಗಾಗಿ ಹೋರಾಟ ನಡೆಸಿದ್ರೂ ಪ್ರಯೋಜನವಾಗಲಿಲ್ಲ. ಜೇಸನ್ ಹೋಲ್ಡರ್ ಅಜೇಯ 34 ರನ್ ಗಳಿಸಿದ್ರೆ, ಆಶ್ಲ್ಯೆ ನರ್ಸ್ 21 ರನ್ ದಾಖಲಿಸಿದ್ರು. ಕೊನೆಗೆ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ 19 ರನ್ ಗಳಿಂದ ಸೋಲು ಅನುಭವಿಸಿತ್ತು.
ಈ ಗೆಲುವಿನೊಂದಿಗೆ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿ ಒಟ್ಟು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತ್ತು. ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 1 ಗೆಲುವು ಮತ್ತು ಎರಡು ಸೋಲಿನೊಂದಿಗೆ 2 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಕಾಲಿನ್ ಮುನ್ರೋ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.