ಸಿಪಿಎಲ್ 2020 – ಅಜೇಯ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದ ಟ್ರಿಂಬಾಗೋ ನೈಟ್ ರೈಡರ್ಸ್
ಶಾರೂಕ್ ಖಾನ್ ಒಡೆತನದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಜೇಯ ಗೆಲುವಿನೊಂದಿಗೆ 2020ರ ಸಿಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಎಂಟು ವಿಕೆಟ್ ಗಳಿಂದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಪರಾಭವಗೊಳಿಸಿತು.
ಈ ಮೂಲಕ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ನಾಲ್ಕನೇ ಬಾರಿ ಸಿಪಿಎಲ್ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. 2020ರ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡಿರುವ ನೈಟ್ ರೈಡರ್ಸ್ ತಂಡ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ಪೊಲಾರ್ಡ್ (ನಾಲ್ಕು ವಿಕೆಟ್) ಮತ್ತು ಫಾವದ್ ಅಹಮ್ಮದ್ (ಎರಡು ವಿಕೆಟ್) ಅವರ ಅದ್ಭುತ ಬೌಲಿಂಗ್ ದಾಳಿಯ ನಡೆಯುವೆಯೂ ಸೇಂಟ್ ಲೂಸಿಯಾ ಝೌಕ್ಸ್ ತಂಡ 19.1 ಓವರ್ ಗಳಲ್ಲಿ 154 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಸೇಂಟ್ ಲೂಸಿಯಾ ತಂಡದ ಪರ ಡೆಯಾಲ್ 29 ರನ್, ಫ್ಲೇಚರ್ 39 ರನ್, ಚೇಸ್ 22 ರನ್ ಹಾಗೂ ನಜಿಬುಲ್ ಝದ್ರಾನ್ 24 ರನ್ ಗಳಿಸಿ ಗಮನ ಸೆಳೆದ್ರು.
ಸವಾಲನ್ನು ಬೆನ್ನಟ್ಟಿದ್ದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ವೆಬ್‍ಸ್ಟಾರ್ (5ರನ್) ಮತ್ತು ಸೈಫರ್ಟ್ (4 ರನ್) ನಿರಾಸೆ ಅನುಭವಿಸಿದ್ರು. ನಂತರ ಆರಂಭಿಕ ಲೆಂಡ್ಲ್ ಸಿಮೋನ್ಸ್ ಮತ್ತು ಡರೇನ್ ಬ್ರೇವೋ ಅವರು ಮೂರನೇ ವಿಕೆಟ್‍ಗೆ ಅಜೇಯ 144 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಸಿಮೋನ್ಸ್ ಅವರು 49 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಅಜೇಯ 84 ರನ್ ಸಿಡಿಸಿದ್ರು. ಹಾಗೇ ಡರೇನ್ ಬ್ರೇವೋ ಅವರು 47 ಎಸೆತಗಳಲ್ಲಿ 2 ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 58 ರನ್ ಗಳಿಸಿದ್ರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಿಮೋನ್ಸ್ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಟೂರ್ನಿಯಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಕಿರಾನ್ ಪೊಲಾರ್ಡ್ ಅವರು ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದ್ರು.