ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎನ್. ಆರ್. ಸಂತೋಷ್ ಅವರು ಮುಖ್ಯಮಂತ್ರಿಗಳ 4 ನೇ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಆಗಿದ್ದಾರೆ. ಆದರೆ ಈ ಆಯ್ಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಒಬ್ಬ ಪ್ರಬಾವಿ ವ್ಯಕ್ತಿ, ನಾಯಕ ಅಸಮಾಧಾನ ಹೊರಹಾಕಿದರೇ, ಅವರನ್ನು ಸಮಾಧಾನ ಪಡಿಸಲು ಹುದ್ದೆ ಸೃಷ್ಟಿಸುವಂತಹ ಕಾರ್ಯಕ್ಕೆ ಆಡಳಿತ ಪಕ್ಷಗಳು ಕೈ ಹಾಕುತ್ತವೆ.
ಹುದ್ದೆಗಳು ಹೇಗೆ ಮತ್ತು ಯಾಕೆ ಸೃಷ್ಟಿ ಆಗುತ್ತವೆ.
ಅಸಮಾಧಾನ ಶಾಂತ ಮಾಡಲು ಕಂಡುಕೊಂಡ ಮಾರ್ಗವೇ ಈ ಹುದ್ದೆ ಸೃಷ್ಠಿ, ಈ ಪರಿಪಾಠ ಬಿಜೆಪಿಯಲ್ಲಿ ಮಾತ್ರವಲ್ಲ, ಬಹುವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದಲ್ಲೂ ಇದೆ. 1994 ರಲ್ಲಿ ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಹಾಗೂ ದೇವೆಗೌಡರ ಪ್ರಯತ್ನದಿಂದ ಜನತಾದಳ ಪಕ್ಷವು ಒಂದು ಶಕ್ತಿಯಾಗಿ ಹೊರಹೊಮ್ಮಿತ್ತು. ಇದರ ಪ್ರತಿಫಲವಾಗಿ 1994 ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಪಕ್ಷ 116 ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿ ಬಹುಮತ ಪಡೆದಿತ್ತು. ಚುನಾವಣೆಗೂ ಮುನ್ನ ಹೆಗಡೆಯವರು ನಾನು ರಾಷ್ಟ್ರ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಆದ್ದರಿಂದ ರಾಜ್ಯ ನಾಯಕತ್ವವನ್ನು ಹೆಚ್.ಡಿ. ದೇವೆಗೌಡರಿಗೆ ವಹಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು.
ರಾಜ್ಯದಲ್ಲಿ ಜನತಾದಳ ಬಹುಮತ ಪಡೆದ ನಂತರದಲ್ಲಿ ಹೆಗಡೆಯವರು ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡರು. ಇದರಿಂದಾಗಿ ಜನತಾದಳದಲ್ಲಿ ಒಳ ಜಗಳ ಶುರುವಾಯಿತು. ಬಳಿಕ ದೇವೇಗೌಡರ ಬೆಂಬಲಿಗರು ರೆಬಲ್ ಆಗಿದ್ದರು. ಪಕ್ಷದ ಆತಂರಿಕ ಶಮನಕ್ಕೆ ರಾಮಕೃಷ್ಣ ಹೆಗಡೆ ಹಿಂದೆ ಸರಿದರು. ಆದರೂ ಪಕ್ಷದಲ್ಲಿ ತಮ್ಮ ಹಿಡಿತ ಕಡಿಮೆ ಆಗಬಾರದು ಎಂದು ಹೆಚ್.ಡಿ. ದೇವೇಗೌಡರು ಸಿಎಂ ಆದರೆ ಜೆ.ಹೆಚ್ ಪಟೇಲ್ ರು ಉಪಮುಖ್ಯಮಂತ್ರಿಯಾಗಿರಬೇಕು ಎಂದು ಷರತ್ತು ವಿಧಿಸಿದ್ದರು. ಜೆ.ಹೆಚ್ ಪಟೇಲ್ರು ರಾಮಕೃಷ್ಣ ಹೆಗಡಯವರ ಬಣದಲ್ಲಿ ಗುರುತಿಸಿಕೊಂಡಿದ್ದರು. ಕೊನೆಗೆ ಈ ರಾಜಿಸೂತ್ರಕ್ಕೆ ಒಪ್ಪಿ ದೇವೇಗೌಡರು ಸಿಎಂ, ಜೆ,ಹೆಚ್ ಪಟೇಲ್ ರು ಡಿಸಿಎಂ ಆಗಿ ಆಡಳಿತ ನಡೆಸಿದರು.
1996 ರಲ್ಲಿ ದೇವೇಗೌಡರು ದೇಶದ ಪ್ರಧಾನ ಮಂತ್ರಿಯಾದರು. ಹಾಗಾಗಿ ರಾಜ್ಯಕ್ಕೆ ಉತ್ತಾರಧಿಕಾರಿಯನ್ನ ಆಯ್ಕೆ ಮಾಡಬೇಕಿತ್ತು. ಸಿದ್ದರಾಮಯ್ಯನವರನ್ನ ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಕೂಡ ನಡೆಯಿತು. ಆದರೆ ಜನತಾ ಪರಿವಾರದಲ್ಲಿ ಜೆ.ಹೆಚ್ ಪಟೇಲ್ ರು ಹಿರಿಯರಾಗಿದ್ದರು. ಅಲ್ಲದೆ ಜೆ. ಹೆಚ್ ಪಟೇಲ್ ರಿಗೆ ರಾಮಕೃಷ್ಣ ಹೆಗಡೆಯವರ ಬೆಂಬಲ ಕೂಡ ಇತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಜೆ.ಹೆಚ್. ಪಟೇಲ್ ಹಾಗೂ ಸಿದ್ದರಾಮಯ್ಯನವರ ನಡುವೆ ಪೈಪೋಟಿ ನಡೆಯಿತು. ಪಟೇಲ್ ರ ಜೊತೆಗೆ 35ಕ್ಕೂ ಹೆಚ್ಚು ಶಾಸಕರು ಇದ್ದರು. ಸರ್ಕಾರ ಬಿಳಿಸುವ ಶಕ್ತಿ ಅವರಿಗಿತ್ತು. ಅಧಿಕಾರ ಕಳೆದುಕೊಳ್ಳುವ ಬಗ್ಗೆ ಜನತಾದಳಕ್ಕೂ ಇಷ್ಟವಿರಲಿಲ್ಲ. ಹಾಗಾಗಿ ಒಂದು ರಾಜಿ ಸೂತ್ರಕ್ಕೆ ಬರಲಾಯಿತು. ಅದರ ಪ್ರಕಾರ ಜೆ. ಹೆಚ್. ಪಟೇಲ್ ಅವರು ಮುಖ್ಯಮಂತ್ರಿ, ಸಿದ್ದರಾಮಯ್ಯನವರು ಉಪಮಖ್ಯಮಂತ್ರಿ ಆಯ್ಕೆಯಾದರು.
2008 ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದಿತ್ತು. ಆಗ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಆಯ್ಕೆಯಾಗಿದ್ದರು. ಯಡಿಯೂರಪ್ಪನವರ ಆಡಳಿತಾವಧಿಯಲ್ಲೂ ಪಕ್ಷದಲ್ಲಿ ಆಂತರಿಕ ಜಗಳ ಶುರುವಾಗಿತ್ತು. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ತಮ್ಮದೇ ಪಕ್ಷದಲ್ಲಿ ಸಾಕಷ್ಟು ಪ್ರಯತ್ನ ನಡೆದಿತ್ತು. ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ಭ್ರಷ್ಟಚಾರದ ಆರೋಪದಲ್ಲಿ ಜೈಲಿಗೆ ಹೋಗಿದ್ದರು. ಆ ಸಮಯದಲ್ಲಿ ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆದಿತ್ತು. ಜೊತೆಗೆ ಅಧಿಕಾರಕ್ಕಾಗಿ ಬಿನ್ನಮತ ಶುರುವಾಗಿತ್ತು. ಆಗ ಡಿಸಿಎಂ ಹುದ್ದೆಗಳನ್ನು ಸೃಷ್ಠಿಸುವಂತ ಮಾಸ್ಟರ್ ಪ್ಲ್ಯಾನ್ ಬಿಜೆಪಿ ಮಾಡಿತ್ತು. ಅದರ ಭಾಗವಾಗಿ ಜಗದೀಶ್ ಶೆಟ್ಟರ್ ಸಿ ಎಂ ಆದರೆ, ಆರ್. ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇದರಿಂದ ರಾಜಕೀಯ ಇತಿಹಾಸದಲ್ಲೇ ಎರಡು ಡಿಸಿಎಂ ಹುದ್ದೆ ಸೃಷ್ಠಿಸಿ ಕೀರ್ತಿ ಬಿಜೆಪಿ ಪಾಲಿನದ್ದಾಗಿದೆ.
ಹುದ್ದೆಗಳ ಸೃಷ್ಟಿ ಈಗಲೂ ಪ್ರಸ್ತುತ
2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು. ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಬಾರದು ಎಂದು ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಜೆಡಿಎಸ್ ಗೆ ಬೆಂಬಲ ನೀಡಿತ್ತು. ಈ ಸಮಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿ, ಕಾಂಗ್ರೆಸ್ ನ ಡಾ.ಜಿ ಪರಮೇಶ್ವರ್ ಡಿಸಿಎಂ ಆಗಿ ಆಯ್ಕೆಯಾದರು.
ಆಯ್ಕೆಯಾದ ಮೈತ್ರಿ ಸರ್ಕಾರ ಹೆಚ್ಚು ದಿನಗಳ ಕಾಲ ಆಡಳಿತದಲ್ಲಿ ಇರಲಿಲ್ಲ. ಬಿಜೆಪಿ ನಡೆಸಿದ ಆಪರೇಷನ್ ಕಮಲಕ್ಕೆ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಯಿತು. ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರಿದರು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿಯಲ್ಲಿ ಸ್ಥಾನಗಳಿಗಾಗಿ ಮತ್ತೆ ಆತಂರಿಕ ಜಗಳ ಶುರುವಾದವು. ಇದರಿಂದಾಗಿ ಬಿಜೆಪಿಯಲ್ಲಿ ಭಿನ್ನಮತ ಶುರುವಾಯಿತು. ಭಿನ್ನಮತ ಸರಿದೂಗಿಸಲು 2008ರಲ್ಲಿ ಎರಡು ಡಿಸಿಎಂ ಸ್ಥಾನ ಸೃಷ್ಠಿಸಿದ ಬಿಜೆಪಿ, 2019 ರಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಠಿ ಮಾಡಿತ್ತು.
ಮೂರು ಡಿಸಿಎಂ ಹುದ್ದೆಗಳನ್ನು ಬಿಜೆಪಿ ಸೃಷ್ಠಿ ಮಾಡಿದ ಭಾಗವಾಗಿ. ಡಾ.ಸಿ,ಎನ್ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಯವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾದರು. ಇದರಿಂದ ಒಂದು ಹಂತ ಅಸಮಾಧಾನ ಬಿಜೆಪಿ ಶಮನ ಮಾಡಿತ್ತು. ಆದರೆ ಸಚಿವ ಸಂಪುಟಕ್ಕೆ ಸೇರಲು ಶಾಸಕರು ಪ್ರಯತ್ನಿಸುತ್ತಿದ್ದರು. ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಕೆಲ ಶಾಸಕರು ಸಚಿವ ಸ್ಥಾನ ಸಿಗದ ಕಾರಣಕ್ಕೆ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಅಂತವರಿಗೆ ಸಚಿವ ಸಂಪುಟ ಪುನರ್ರಚನೆ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದು ಸಮಾಧಾನ ಪಡಿಸಲಾಗಿತ್ತು. ಇನ್ನೂ ಕೆಲವರನ್ನು ಸಮಾಧಾನ ಪಡಿಸಲು ಮೂರು ರಾಜಕೀಯ ಕಾರ್ಯದರ್ಶಿ ಹುದ್ದೆಗಳನ್ನು ಸೃಷ್ಠಿ ಬಿಜೆಪಿ ಮಾಡಿತ್ತು.ಇದೀಗ ಮತ್ತೆ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಎದುರಾಗಿದೆ.
ಒಂದಡೆ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ , ಮತ್ತೊಂದೆಡೆ ಸಚಿವ ಸಂಪುಟ ಪುನಃರಚನೆ, ಈ ಎರಡು ಸನ್ನಿವೇಶಗಳು ಬಿಜೆಪಿ ಸಂಕಷ್ಟ ತಂದಿವೆ. ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿ ಅವರನ್ನು ರಾಜ್ಯಸಭೆ ಕಳಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ತಮ್ಮ ನಿವಾಸದಲ್ಲಿ 25ಕ್ಕೂ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಇನ್ನೊಂದೆಡೆ ಮೈತ್ರಿ ಸರ್ಕಾರ ಪತನಗೊಳಿಸುವ ಕಾರ್ಯದಲ್ಲಿ ತೆರೆಮರೆಯಲ್ಲೇ ತನ್ನ ಚಾಣಕ್ಷತೆ ತೋರಿದ ಎನ್.ಆರ್.ಸಂತೋಷ್ ಇಂದು ಸಿಎಂ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಕಾರ್ಯದರ್ಶಿ ಸ್ಥಾನವು ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನವನ್ನು ಹೊಂದಿದೆ.
ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ರಚಿಸಿದ ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಡಿ.ಕೆ ಶಿವಕುಮಾರ ಸೇರಿದಂತೆ ಕಾಂಗ್ರೆಸ್- ಜೆಡಿಎಸ್ ಕೆಲ ನಾಯಕರನ್ನು ನೇರವಾಗಿ ವಿರೋಧ ಹಾಕಿಕೊಂಡಿದ್ದರು. ಅಲ್ಲದೆ ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಎಲ್ಲಾ ವ್ಯವಸ್ಥೆ ನೋಡಿಕೊಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣಿಕರ್ತರಾಗಿದ್ದರು.
ಅಲ್ಲದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ 9 ವರ್ಷಗಳ ಇದ್ದು. ಅವರ ಆಪ್ತ ಕಾರ್ಯದರ್ಶಿ ಕೆಲಸವನ್ನು ಸಂತೋಷ್ ನಿಭಾಯಿಸಿದ್ದರು. ಯಡಿಯೂರಪ್ಪನವರ ಸುಖ,ದುಖಃಗಳಲ್ಲಿ ಭಾಗಿಯಾಗಿದ್ದರು. ಅಂತಹ ಸಂತೋಷ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಬಳಿಕ ಕಾಣೆಯಾಗಿದ್ದರು. ಸದಾ ಯಡಿಯೂರಪ್ಪನವರ ಜೊತೆ ಇರುತ್ತಿದ್ದ ಸಂತೋಷ್ ಏಕಾಏಕಿಯಾಗಿ ನಾಪತ್ತೆಯಾಗಿದ್ದರು. ಇದೇ ಸಮಯದಲ್ಲಿ ಯಡಿಯೂರಪ್ಪ ವಿರುದ್ದ ಅನಾಮದೇಯ ಪತ್ರಗಳು ಹೊರ ಬಿದ್ದವು. ಆ ಪತ್ರಗಳ ಹಿಂದೆ ಸಂತೋಷ್ ಇದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.
ಎನ್. ಆರ್ ಸಂತೋಷ್ ಬಿ,ಎಸ್. ಯಡಿಯೂರಪ್ಪ ಅವರ ವಿರುಧ್ದ ಅಸಮಾಧಾನ ಹೊಂದಿದ್ದರು. ಅವರ ಅಸಮಾಧಾನ ಶಮನ ಮಾಡಲು ನಾಲ್ಕನೇ ರಾಜಕೀಯ ಸ್ಥಾನ ಸೃಷ್ಠಿ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ. ಮೂರು ರಾಜಕೀಯ ಕಾರ್ಯದರ್ಶಿ ಸ್ಥಾನಗಳು ಇದ್ದರೂ ನಾಲ್ಕನೇ ಹುದ್ದೆ ಯಾಕೆ ಎಂಬ ಸಹಜವಾದ ಪ್ರಶ್ನೆ ಮೂಡಿ ಬರುತ್ತದೆ. ಅದಕ್ಕೆ ಉತ್ತರ ಎಂದರೆ ಎನ್.ಆರ್. ಸಂತೋಷ್ ಯಡಿಯೂರಪ್ಪ ಅವರ ಜೊತೆ 9 ವರ್ಷಗಳ ಕಾಲ ಇದ್ದವರು. ಅಂತಹವರು ಸಿಎಂ ವಿರುದ್ದ ಅಸಮಾಧಾನ ಹೊಂದಿದರೇ ಅದು ಪಕ್ಷಕ್ಕೆ ದೊಡ್ಡಮಟ್ಟದ ಪೆಟ್ಟು ಬೀಳುತ್ತದೆ ಎಂಬ ಲೆಕ್ಕಚಾರದಲ್ಲಿ ನಾಲ್ಕನೇ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಠಿ ಮಾಡಲಾಗಿದೆ ಎನ್ನಲಾಗಿದೆ.
ಹುದ್ದೆಗಳ ಸೃಷ್ಠಿ ಈ ಕಾಲದಲ್ಲೇ ಅಷ್ಟೇ ಅಲ್ಲ ಗತಕಾಲದಿಂದಲೂ ಇದೆ
ರಾಜಕೀಯವಾಗಿ ಸಂಕಷ್ಟ ಎದುರಾದಾಗ ಹುದ್ದೆಗಳ ಸೃಷ್ಟಿ ಮಾಡುವ ಪರಿಪಾಠ ಗತಕಾಲದಿಂದಲೂ ನಡೆದು ಬಂದಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ “ಮಹಾಭಾರತ” ಹೌದು ಮಹಾಭಾರತದಲ್ಲಿ ಹಸ್ತಿನಾಪುರದ ಸಿಂಹಾಸನಕ್ಕಾಗಿ ಧೃತರಾಷ್ಟ್ರ ಮಹಾರಾಜ 25 ವರ್ಷಗಳ ಕಾಲ ಕಾದಿರುತ್ತಾನೆ. ಇನ್ನೇನೂ ಹಸ್ತಿನಾಪುರದ ರಾಜನಾಗಿ, ಸಿಂಹಾಸನಕ್ಕೆ ಏರುವ ಹೊತ್ತಿನಲ್ಲಿ ಧರ್ಮ ಮತ್ತು ಶಾಸ್ತ್ರಗಳ ಪ್ರಕಾರ ಒಬ್ಬ ಅಂಧ (ಕುರುಡ) ರಾಜನಾಗಬಾರದು ಎಂದು ಮಂತ್ರಿ ಹೇಳುತ್ತಾನೆ. ಆದ್ದರಿಂದ ಧೃತರಾಷ್ಟ್ರ ಮಹಾರಾಜನಿಗೆ ಅಧಿಕಾರ ಕೈ ತಪ್ಪುತ್ತದೆ. ಅಲ್ಲದೆ ಪಾಂಡು ಮಹಾರಾಜ ಹಸ್ತಿನಾಪುರದ ರಾಜನಾಗಿ ಆಯ್ಕೆಯಾಗುತ್ತಾನೆ. ಇದರಿಂದಾಗಿ ಪಾಂಡು ಮಹಾರಾಜನ ಮೇಲೆ ಧೃತರಾಷ್ಟ್ರ ಮಹಾರಾಜ ಹಗೆ ಸಾಧಿಸುತ್ತಾನೆ. ಜೊತೆಗೆ ಸಾಕಷ್ಟು ಅಸಮಾಧನ ಹೊಂದಿರುತ್ತಾನೆ. ಇದನ್ನು ಸರಿದೂಗಿಸಲು ಮತ್ತು ಅಣ್ಣ ಧೃತರಾಷ್ಟ್ರನ ಅಸಮಾಧಾನ ಶಮನ ಮಾಡಲು, ಪಾಂಡು ಮಹಾರಾಜ ರಾಜ್ಯಾಡಳಿತದ ಸಲಹೆಗಾರ ಎಂಬ ಹುದ್ದೆ ಸೃಷ್ಟಿ ಮಾಡುತ್ತಾನೆ. ಅಲ್ಲದೆ ಈ ಹುದ್ದೆ ರಾಜ, ಮತ್ತು ಮಂತ್ರಿ ಸ್ಥಾನಕ್ಕಿಂತ ಹೆಚ್ಚು ಗೌರವವುಳ್ಳದ್ದು ಎಂದು ಹೇಳುತ್ತಾನೆ.
ಹೀಗೆ ಗತಕಾಲದಿಂದಲೂ ಆಡಳಿತದ ವಿರುದ್ದ ಯಾರಾದರೂ ಅಸಮಾಧಾನ ಹೊರ ಹಾಕಿದರೇ, ಜೊತೆಗೆ ಪಕ್ಷದಲ್ಲಿ ಆಂತರಿಕ ಜಗಳಕ್ಕೆ ಕಾರಣರಾದರೆ ಅವರಿಗೆ ಸಮಾಧಾನ ಪಡಿಸಲು ಕಂಡುಕೊಂಡ ಮಾರ್ಗವೇ ಈ ಹುದ್ದೆ ಸೃಷ್ಟಿಯ ತಂತ್ರ.
ಹನುಮಂತ ದುರ್ಗದ್








