ದಿಗ್ಗಜ ಕ್ರಿಕೆಟ್ ಅಂಪೈರ್ ರೂಡಿ ಕರ್ಟ್ಜೆನ್ ರಸ್ತೆ ಅಪಘಾತದಲ್ಲಿ ನಿಧನ… Rudy Kurtzen car accident
ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟ್ ಅಂಪೈರ್ ರೂಡಿ ಕರ್ಟ್ಜೆನ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕರ್ಟ್ಜೆನ್ ರಸ್ತೆ ಅಫಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ.
1981 ರಿಂದ ದೇಶೀಯ ಕ್ರಿಕೆಟ್ನಲ್ಲಿ ಅಂಪೈರಿಂಗ್ ಆರಂಭಿಸಿದ ರೂಡಿ ಕರ್ಟ್ಜೆನ್, 1992 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಪೈರಿಂಗ್ ಮಾಡುವ ಅವಕಾಶವನ್ನ ಗಿಟ್ಟಿಸಿಕೊಂಡಿದ್ದರು. ಪೋರ್ಟ್ ಎಲಿಜಬೆತ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಅಂಪೈರಿಂಗ್ ಮಾಡಿದ್ದರು.
ರೂಡಿ ಅವರು ದಾಖಲೆಯ 209 ODIಗಳು, 108 ಟೆಸ್ಟ್ಗಳು ಮತ್ತು 14 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದಾರೆ. ಸ್ಟೀವ್ ಬಕ್ನರ್ ನಂತರ 100 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಎರಡನೇ ಅಂಪೈರ್ ಆಗಿದ್ದಾರೆ.
2010ರಲ್ಲಿ ಪಾಕಿಸ್ತಾನ ವಿರುದ್ಧದ ಲಾರ್ಡ್ಸ್ ಟೆಸ್ಟ್ನಲ್ಲಿ ಕರ್ಟ್ಜೆನ್ ಕೊನೆಯ ಬಾರಿಗೆ ಮೈದಾನಕ್ಕಿಳಿದಿದ್ದರು. ಅವರು 2011 ರವರೆಗೆ ಐಪಿಎಲ್ನಲ್ಲಿ ಅಂಪೈರ್ ಆಗಿದ್ದರು.
ಸೆಹ್ವಾಗ್ ಭಾವನಾತ್ಮಕ ಟ್ವೀಟ್
ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ರೂಡಿ ಕರ್ಟ್ಜೆನ್ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ನಾನು ರೂಡಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ನಾನು ವೇಗದ ಹೊಡೆತಗಳನ್ನು ಆಡಿದಾಗಲೆಲ್ಲ ಅವರು ಗದರಿಸಿ ಎಚ್ಚರಿಕೆಯಿಂದ ಆಡುವಂತೆ ಹೇಳುತ್ತಿದ್ದರು. ನಾನು ನಿಮ್ಮ ಬ್ಯಾಟಿಂಗ್ ನೋಡಬೇಕು ಎನ್ನುತ್ತಿದ್ದರು.
ರೂಡಿ ಒಮ್ಮೆ ತಮ್ಮ ಮಗನಿಗೆ ಕ್ರಿಕೆಟ್ ಪ್ಯಾಡ್ ಖರೀದಿಸಲು ಬಯಸಿದ್ದರು ಈ ವಿಷಯದಲ್ಲಿ ಸೆಹ್ವಾಗ್ ಅವರ ಸಲಹೆಯನ್ನು ಕೇಳಿದರು. ಸೆಹ್ವಾಗ್ ಅವರಿಗೆ ಆ ಪ್ಯಾಡ್ ಉಡುಗೊರೆಯಾಗಿ ನೀಡಿದ್ದು ತುಂಬಾ ಖುಷಿ ಕೊಟ್ಟಿತ್ತು. ಅವರು ತುಂಬಾ ಸೌಮ್ಯ ಮತ್ತು ಅದ್ಭುತ ವ್ಯಕ್ತಿ ಎಂದು ಸೆಹ್ವಾಗ್ ಬರೆದಿದ್ದಾರೆ.








