ಬೆಂಗಳೂರು: ಕೊರೊನಾ ಹೊರತಾಗಿ ಬೇರೆ ಖಾಯಿಲೆ ಇರುವ ರೋಗಿಗಳನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಎಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲು ಬಿಬಿಎಂಪಿ ಆಯುಕ್ತರಿಗೆ ಅವರು ಸೂಚನೆ ನೀಡಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆಗಲಿರುವ ಶಿಕ್ಷೆಯ ಬಗ್ಗೆಯೂ ಸುತ್ತೋಲೆಯಲ್ಲಿ ದಾಖಲಿಸುವಂತೆ ತಿಳಿಸಿದ್ದಾರೆ.
ಕೊರೊನಾ ಸೋಂಕಿತರು ನೇರವಾಗಿ ಆಸ್ಪತ್ರೆಗಳಿಗೆ ಹೋಗಬೇಕಿಲ್ಲ. ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡುವ ಬಿಬಿಎಂಪಿ ಸಿಬ್ಬಂದಿಯೇ ಆಂಬುಲೆನ್ಸ್ ತಂದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಲ್ಲಿಯ ತನಕ ಹೊರಗೆ ಬರದೆ ಮನೆಯಲ್ಲೇ ಇರಬೇಕು ಎಂದು ಆರ್. ಅಶೋಕ್ ಮನವಿ ಮಾಡಿದರು.
ಸೊಂಕಿತರು ಆಸ್ಪತ್ರೆಗೆ ದಾಖಲಾಗುವ ಮುನ್ನ ಕರಾರು ಪತ್ರಕ್ಕೆ ಸಹಿ ಹಾಕಬೇಕು ಎಂಬ ನಿಯಮವನ್ನು ಜಾರಿಗೆ ತಂದಿಲ್ಲ. ಸಹಿ ಹಾಕಿಸಿಕೊಳ್ಳುತ್ತಿದ್ದರೆ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಆರ್.ಅಶೋಕ್ ಬಿಬಿಎಂಪಿ ಸದಸ್ಯರುಗಳ ಜೊತೆ ಸಭೆ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ಸಂಬಂಧ ಪಾಲಿಕೆ ವಾರ್ಡ್ ಸಂಖ್ಯೆ 01 ರಿಂದ ವಾರ್ಡ್ ಸಂಖ್ಯೆ 70 ರವರೆಗಿನ ಸದಸ್ಯರುಗಳ ಜೊತೆ ಸಭೆ ನಡೆಸಿದರು.