ಚಾಮರಾಜನಗರ : ಜನಪ್ರತಿನಿಧಿಗಳ ನಿರಾಸಕ್ತಿ ಮತ್ತು ಅಧಿಕಾರಿಗಳ ಜಾಣಕುರುಡುನಿಂದಾಗಿ ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೇ ಶವಹೊತ್ತು ಜೀವದ ಹಂಗು ತೊರೆದು ಹೊಳೆ ದಾಟುವ ಮನಕಲುಕುವ ಪ್ರಸಂಗ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಜೀವಂತವಾಗಿದೆ.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ಸುವರ್ಣಾವತಿ ಹೊಳೆಯ ನೀರಿನ ನಡುವೆ ಹಾಯ್ದು ಖಾಸಗಿ ಜಮೀನುಗಳಿಗೆ ಹೋಗಬೇಕಾದ ಪರಿಸ್ಥಿತಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ಮಾಂಬಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ, ಇಲ್ಲಿನ ನಿವಾಸಿಗಳು ತಮ್ಮ ಸಂಬಂಧಿಕರು ಕುಟುಂಬಸ್ಥರು ಸಾವನ್ನಪ್ಪಿದರೆ ಇಂತಹ ಗಂಭೀರ ಸಮಸ್ಯೆ ಇದ್ದರೂ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಅನಾರೋಗ್ಯದಿಂದ ಭಾನುವಾರ ಮೃತಪಟ್ಟ ಮಾನಸ ಗಂಗೋತ್ರಿ ವಿದ್ಯಾರ್ಥಿ ಹೋರಾಟಗಾರ, ಎಂಫಿಎಲ್ ಪದವೀಧರರಾಗಿದ್ದ ಕೇಶವಮೂರ್ತಿರವರ ಅಂತ್ಯಸಂಸ್ಕಾರಕ್ಕಾಗಿ ಕಾಲುಸಂಕದ ಮೂಲಕ ಹಾದುಹೋಗಿದ್ದ ನೂರಾರು ವಿದ್ಯಾರ್ಥಿಗಳು ನರಕ ದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋದಿಂದ ಜಿಲ್ಲಾಡಳಿತ, ಸ್ಥಳಿಯ ಹಾಲಿ ಶಾಸಕ ಎನ್.ಮಹೇಶ್ ಹಿಂದಿನ ಶಾಸಕರರಾಗಿದ್ದ ಜಯಣ್ಣ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಹೊಸ ಸ್ಮಶಾನಕ್ಕೆ ಜಾಗವನ್ನಾದರೂ ಕೊಡಿ ಇಲ್ಲವೇ ಕನಿಷ್ಠ ಕಿರು ಸೇತುವೆಯ ತನ್ನ ಅದರೂ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಮಳೆಗಾಲ ಸಮಯದಲ್ಲಿ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ, ಮೃತ ದೇಹವನ್ನು ಹೊತ್ತು ಹೊಳೆಯ ನೀರಿನಲ್ಲೇ ನಡೆಯಬೇಕು ಇಲ್ಲಾ ಮರದ ಹಲಗೆಯ ಸತುವೆಯ ಮೇಲೆ ಪ್ರಾಣದ ಹಂಗು ತೊರೆದು ಸಾಗಬೇಕಾದ ದುಸ್ಥಿತಿ ಇಂದಿಗೂ ಜೀವಂವಾಗಿದೆ.
ರಭಸವಾಗಿ ಹರಿಯುವ ಸುವರ್ಣಾವತಿ ಹೊಳೆ ದಾಟಲು ಹರಸಾಹಸ ಮಾಡಬೇಕು. ನೀರಿನ ಸೆಳೆತ ಜಾಸ್ತಿ ಇರುವುದರಿಂದ ಶವ ಹೊತ್ತು ಸಾಗುವುದಂತು ಬಹಳ ಅಪಾಯಕಾರಿಯಾಗಿದೆ. ಹಾಗಾಗಿ ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಮೃತದೇಹ ಹೊರುವವರು ತಮ್ಮ ಜೀವ ಕೈಯಲ್ಲಿ ಹಿಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು.
ಆದರೆ ಶವ ಹೊತ್ತೊಯ್ಯುವಾಗ ಸ್ವಲ್ಪ ಯಾಮಾರಿದರು ಮೃತದೇಹ ಹೊರುತ್ತಿರುವವರೇ ಮೃತರಾದರೂ ಆಶ್ಚರ್ಯವಿಲ್ಲ.
ಗ್ರಾಮದ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಇದು ತಮಗೆ ಸೇರಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ನ್ಯಾಯಾಲಯಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿ ತ್ವರಿತಗತಿಯಲ್ಲಿ ವಿವಾದ ಬಗೆಹರಿಸುವಲ್ಲಿ ಸರ್ಕಾರಿ ಅಧಿಕಾರಿಗಳು ವಿಫಲರಾಗಿದ್ದೇ ಮ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಹೊಳೆ ಮದ್ಯೆ ಶವ ಹೊತ್ತು ಹೆಣಗಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್ ಮಹೇಶ್ ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿ ಎರಡು ವರ್ಷವಾದರೂ ಸಹ ಸಮಸ್ಯೆ ಹಾಗೇಯೇ ಮುಂದುವರೆದಿದೆ.
ಇನ್ನೂ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಇದೇ ಗ್ರಾಮದವರು. ತಮ್ಮ ಅವಧಿಯಲ್ಲಿ ತಮ್ಮೂರಿನ ಸಮಸ್ಯೆಪರಿಹರಿಸುವಲ್ಲಿ ಅವರೂ ಸಹ ವಿಫಲರಾಗಿದ್ದರು. ಮಾಂಬಳ್ಳಿ ಪಕ್ಕದ ಮದ್ದೂರು ಗ್ರಾಮದ ಎಸ್ ಬಾಲರಾಜುರವರೂ ಸಹ ಶಾಸಕರಾಗಿದ್ದವರು, ಮಾಂಬಳ್ಳಿ ಗ್ರಾಮದ ಸ್ಮಶಾನದ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾಮದ ಈ ಸಮಸ್ಯೆಗೆ ಜನಪ್ರತಿನಿಧಿಗಳ ಇಚ್ಚಾಶಕ್ತಿಯೇ ಕಾರಣ ಎನ್ನಲಾಗುತ್ತಿದೆ.
ಒಂದುಕಡೆ ಜನಪ್ರತಿನಿಧಿಗಳ ನಿರಾಸಕ್ತಿ ಮತ್ತೊಂದೆಡೆ ಅಧಿಕಾರಿಗಳ ಜಾಣ ಕುರುಡುನಿಂದಾಗಿ ಮಾಂಬಳ್ಳಿ ಜನತೆ ಮಾತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಘಾಡ ನಿದ್ರೆಯಿಂದ ಮೇಲೆದ್ದು, ಜಲ್ವಂತ ಸಮಸ್ಯೆಯಾಗಿರುವುದನ್ನು ಬಗೆಹರಿಸುವಲ್ಲಿ ಮುಂದಾಗಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.








