ಹಾಸನ: ಅನಾರೋಗ್ಯದಿಂದಾಗಿ ಸಿಆರ್ ಪಿಎಫ್ ಯೋಧ (CRPF Soldier) ರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಹೊಳೆನರಸೀಪುರ (Holenarasipur) ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ರವಿಶಂಕರ್.ಎಂ.ಆರ್. (39) ಸಾವನ್ನಪ್ಪಿದ ಯೋಧ. ವೈದ್ಯರ ನಿರ್ಲಕ್ಷ್ಯದಿಂದಲೇ ಯೋಧ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ಯೋಧ ರವಿಶಂಕರ್ ನಿವೃತ್ತಿಗೆ ಮೂರು ವರ್ಷ ಬಾಕಿಯಿತ್ತು. ಒಂದು ವಾರದ ಹಿಂದೆ ಹೊಳೆನರಸೀಪುರಕ್ಕೆ ರವಿಶಂಕರ್ ಬಂದಿದ್ದರು.
ಆದರೆ, ಇಂದು ಅವರು ಮರಳಿ ಕರ್ತವ್ಯಕ್ಕೆ ತೆರಳಬೇಕಿತ್ತು. ಆದರೆ, ಶುಕ್ರವಾರ ಅವರಲ್ಲಿ ಏಕಾಏಕಿ ಸುಸ್ತು, ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನೂ ಕೂಡಲೇ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ (Hospital) ದಾಖಲಿಸಲಾಯಿತು. ಆದರೆ, ವೈದ್ಯರು ಸರಿಯಾಗಿ ತಪಾಸಣೆ ಮಾಡದೇ ಕೇವಲ ಮಾತ್ರೆ ನೀಡಿ ಕಳುಹಿಸಿದ್ದರು ಎನ್ನಲಾಗಿದೆ.
ಮನೆಗೆ ತೆರಳುತ್ತಿದ್ದಂತೆ ಯೋಧ ರವಿಶಂಕರ್.ಎಂ.ಆರ್. ಸಾವನ್ನಪ್ಪಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿದ್ದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರವಿಶಂಕರ್ ಸಾವಿಗೆ ವೈದ್ಯನೇ ನೇರ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.
ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯೋಧನ ಶವ ಇರಿಸಲಾಗಿದೆ. ಯೋಧ ಪತ್ನಿ ನಂದಿನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








