ಸದ್ಯ ಪ್ರಪಂಚವೇ ಕೊರೊನಾಮಯವಾಗಿಬಿಟ್ಟಿದೆ. ಎಲ್ಲೆಲ್ಲೂ ಕೊರೊನಾ ಕೊರೊನಾ ಎಂಬ ಪದವೇ ಕೇಳಿಬರುತ್ತಿವೆ. ಈ ಹೆಮ್ಮಾರಿ ಕೊರೊನಾ ಈಗಾಗಲೇ ಸಾವಿರಾರು ಮಂದಿಯ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಸೋಂಕಿನಿಂದ ನರಳಾಡುತ್ತಿದ್ದಾರೆ. ಇನ್ನು ಕೊರೊನಾ ಸೋಂಕು ಹರಡುವ ಬಗ್ಗೆ ಮಾಧ್ಯಮಗಳು ಸಾಕಷ್ಟು ಬಾರಿ ಹೇಳಿವೆ. ಆದ್ರೂ ಜನರಲ್ಲಿ ಸಣ್ಣ ಸಣ್ಣ ಅನುಮಾನಗಳು ಇದ್ದೇ ಇವೆ. ಎಲ್ಲರಿಗೂ ಗೊತ್ತಿರುವ ಹಾಗೆ ಎಂಜಲಿನಿಂದ ಕೊರೊನಾ ವೈರಸ್ ಹರಡುತ್ತದೆ. ಇದು ಹೊರತುಪಡಿಸಿ ರಕ್ತ, ಕಣ್ಣೀರು, ಬೆವರು ಇತ್ಯಾದಿಗಳಿಂದ ಕೊರೊನಾ ಹರಡಬಲ್ಲುದಾ ಎಂಬುದು ಅನೇಕರ ಶಂಕೆ. ಈ ಪ್ರಶ್ನೆಗಳಿಗೆ ವೈದ್ಯಕೀಯ ಪತ್ರಿಕೆಯೊಂದು ಉತ್ತರ ನೀಡಿದ್ದು, ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಈ ಮೇಲಿನ ದೈಹಿಕ ಧ್ರವಗಳಿಂದ ವೈರಸ್ ಹರಡವುದಿಲ್ಲವಂತೆ. ಕಣ್ಣೀರಿನಲ್ಲಿ ಕೊರೊನಾ ವೈರಸ್ ಇರುವುದಿಲ್ಲ ಎಂದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ಕೋವಿಡ್-19 ರೋಗಿಗಳ ಕಣ್ಣೀರಿನ ಸ್ಯಾಂಪಲ್ ಗಳನ್ನ ಪಡೆದು ಈ ಅಧ್ಯಯನ ನಡೆಸಿದ್ದಾರೆ. ಈ ರೋಗಿಗಳಲ್ಲಿ ಮೊದಲು ರೋಗ ಲಕ್ಷಣ ಕಾಣಿಸಿಕೊಂಡು 20 ದಿನ ನಂತರ ಚೇತರಿಸಿಕೊಳ್ಳುವವರೆಗೆ ಕಣ್ಣೀರಿನ ಮಾದರಿಗಳನ್ನು ಪಡೆಯಲಾಗಿತ್ತು. ಈ ಎರಡು ವಾರಗಳ ಅವಧಿಯಲ್ಲಿ ಕಣ್ಣೀರಿನ ಸ್ಯಾಂಪಲ್ ಗಳಲ್ಲಿ ಯಾವುದೇ ವೈರಸ್ ಗೋಚರವಾಗಿಲ್ಲ. ಆದ್ದರಿಂದ ಕಣ್ಣೀರಿನ ಬಗ್ಗೆ ಕಳವಳ ಪಡುವ ಅಗತ್ಯ ಇಲ್ಲ. ಕಣ್ಣೀರಿನಿಂದ ಕೊರೊನಾ ಸೋಂಕು ಹರಡುವುದಿಲ್ಲ. ಒಂದು ವೇಳೆ ಕೊರೊನಾ ಭಯದಿಂದ ಯಾರಾದರೂ ಕಣ್ಣೀರಿಡುತ್ತಿದ್ದರೆ ಅವರ ಕಣ್ಣೀರು ಒರೆಸಲು ಅಡ್ಡಿ ಇಲ್ಲ. ಹಾಗಂತ ನಿಮ್ಮ ಕೈ ಸ್ವಚ್ಛ ಮಾಡಿಕೊಳ್ಳುವುದನ್ನು ಮರೆಯದಿರಿ.








