ನಿಮ್ಮ ನೆಹರೂ ಅವರನ್ನ ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು – ಸಿಟಿ ರವಿ
ಕೆಲ ದಿನಗಳಿಂದ ಬರೀ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಇತ್ತೀಚೆಗೆ ನೆಹರೂ , ಇಂದಿರಾ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ರು.. ಸಿಟಿ ರವಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಕಟುವಾಗಿ ತಿರುಗೇಟು ನೀಡಿದ್ದರು..
ಇದೀಗ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ ಅವರು , ಟ್ವೀಟ್ ಮಾಡಿ ‘ಮಾನ್ಯ ಸಿದ್ದರಾಮಯ್ಯನವರೇ, ನನಗೆ ನಿಮ್ಮ ನೆಹರೂರವರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು’ ಎಂದು ಹೇಳಿದ್ದಾರೆ. ‘ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟಿದ್ದರೆ ಬಡವರ ಹಸಿವು ನೀಗುತ್ತಿರಲಿಲ್ಲವೇ. ನಿಮ್ಮನ್ನು ನೋಡಿದಾಗ ನಿಮ್ಮ ಸ್ನೇಹಿತರು ಹೇಳುತ್ತಿದ್ದ ನಿಮ್ಮ ಬ್ರಾಂಡ್ ನೆನಪಾಯಿತು’ ಎಂದು ಬರೆದುಕೊಂಡಿದ್ದಾರೆ.
ಸಿಟಿ ರವಿ ಅವರಿಗೆ ಟಾಂಗ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಬಹುದಿತ್ತಲ್ಲ, ಹಾಗ್ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ಅಹಮದಾಬಾದ್ ನಲ್ಲಿ ಕ್ರೀಡಾಂಗಣಕ್ಕೆ ಮೋದಿ ಹೆಸರಿಟ್ಟಿದ್ದಾರೆ. ದೆಹಲಿಯಲ್ಲಿ ಜೇಟ್ಲಿ ಹೆಸರಿಟ್ಟಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲಿ ದೀನ್ ದಯಾಳ್ ಹೆಸರು, ಯಲಹಂಕದಲ್ಲಿ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ. ಇದನ್ನೆಲ್ಲ ಹುಕ್ಕಾ ಬಾರ್ ಎಂದು ಕರೆಯಲು ಆಗುತ್ತಾ? ಇದಕ್ಕೆಲ್ಲ ಬಿಜೆಪಿ ನಾಯಕರ ಹೆಸರಿಟ್ಟಿದ್ದಕ್ಕೆ ನಾವು ಎಂದಾದರೂ ಪ್ರಶ್ನೆ ಮಾಡಿದ್ದೇವಾ? ಹೆಸರು ಬದಲಿಸುವಂತೆ ಹೇಳಿದ್ದೇವಾ? ಸಿ.ಟಿ.ರವಿ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದ್ದರು. ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.








