‘ತಾನು ಕಳ್ಳ, ಪರರ ನಂಬ’ ಸಿದ್ದರಾಮಯ್ಯಗೆ ಸಿ.ಟಿ ರವಿ ಟಾಂಗ್
ಚಿಕ್ಕಮಗಳೂರು, ಜುಲೈ 7: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಟ್ವೀಟ್ ಮೂಲಕ ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಚಿವ ಸಿ.ಟಿ ರವಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ?ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೇ ಎಂದು ಪ್ರಶ್ನಿಸಿದ್ದರು.
ಸಿದ್ದರಾಮಯ್ಯನವರಿಗೆ ಸಚಿವ ಸಿ.ಟಿ ರವಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದು, ತಾನು ಕಳ್ಳ, ಪರರ ನಂಬ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ತಾನು ಕಳ್ಳ, ಪರರ ನಂಬ..
ನಿಮಗೆ, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಇರುವಂತೆ ಬಿ.ಎಲ್ ಸಂತೋಷ್ ಅವರಿಗೆ ಒಳಗೊಂದು ಹೊರಗೊಂದು ಇಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಮಾಡುತ್ತಾರೆ. ತಪ್ಪು ಮಾಡಿದಾಗ ತಿಳಿಹೇಳುತ್ತಾರೆ.
ಬಿ.ಎಲ್ ಸಂತೋಷ್ ಅವರಂತ ಬದುಕನ್ನೇ ರಾಷ್ಟ್ರಕ್ಕೆ ಸಮರ್ಪಿಸಿಕೊಂಡವರಿಗೆ ನಿಮಗಿರುವ ಸಣ್ಣ ಬುದ್ಧಿ ಇರಲ್ಲ ಬಿಡಿ ಎಂದು ಸಿ.ಟಿ. ರವಿ ರೀಟ್ವೀಟ್ ಮಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಿವಿದಿದ್ದಾರೆ.
ಅಷ್ಟೇ ಅಲ್ಲ ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೆ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ. ಚೀನಾ ಗಡಿ ಒಳಗೆ ನುಸುಳಿದೆ ಎಂದು ನೋಡಿ ಬಂದಿದ್ದೀರಾ? ಒಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಪ್ರಾಥಮಿಕ ಮಾಹಿತಿ ಇರುತ್ತದೆಂಬುದು ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ ಎಂದು ವ್ಯಂಗ್ಯವಾಗಿ ಸಿದ್ದರಾಮಯ್ಯ ಅವರ ದಾಟಿಯಲ್ಲೇ ಉತ್ತರಿಸಿದ್ದಾರೆ.