ಅರಬ್ಬಿ ಸಮುದ್ರದಲ್ಲಿ ತೌಕ್ಟೇ ತಾಂಡವ : ಕರ್ನಾಟಕದಲ್ಲಿ ಭಾರಿ ಮಳೆ
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ತೌಕ್ಟೇ ಚಂಡಮಾರುತ ಅಬ್ಬರಿಸಲಿದ್ದು, ಮೇ 14 ಹಾಗೂ 15 ರಂದು ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತೌಕ್ಟೇ ಚಂಡಮಾರುತ ಆರಂಭದಲ್ಲಿ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ.
ಮೇ 14ರ ಬೆಳಗ್ಗೆ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಪಕ್ಕದ ಲಕ್ಷದ್ವೀಪ ಪ್ರದೇಶದಾದ್ಯಂತ ಉತ್ತರ ಹಾಗೂ ವಾಯವ್ಯ ದಿಕ್ಕಿಗೆ ಚಂಡಮಾರುತ ಚಲಿಸುವ ಸಾಧ್ಯತೆ ಇದೆ.
ಮೇ 15ರ ಸುಮಾರಿಗೆ ಒತ್ತಡ ತೀವ್ರಗೊಳ್ಳುವ ಸಾಧ್ಯತೆ ಇದೆ. ಮೇ 16ರ ಸುಮಾರಿಗೆ ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗದಲ್ಲಿ ಚಂಡಮಾರುತದ ಬಿರುಗಾಳಿ ತೀವ್ರವಾಗಬಹುದು.
ಬಳಿಕ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಡಿಮೆ ಒತ್ತಡದಿಂದಾಗಿ ಮೇ 14 ಹಾಗೂ 15ರಂದು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗ ಹಾಗೂ ಕರ್ನಾಟಕದ ಕರಾವಳಿ ಉದ್ದಕ್ಕೂ ಮೇ 14ರಿಂದ ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.










