‘ನಾಗರಹೊಳೆ’, ‘ಸಿಂಹದಮರಿ ಸೈನ್ಯ’ದಂತಹ ಅರಣ್ಯಕ್ಕೆ ಸಂಬಂಧಿಸಿದ ವಸ್ತುಗಳ ಸಿನಿಮಾ ಮಾಡಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಮತ್ತೆ ಇದೀಗ ‘ಗಂಧದಗುಡಿ’ಯಂತಹ ಪರಿಪೂರ್ಣ ಅರಣ್ಯ ಕಥಾನಕವೊಂದನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ದರ್ಶನ್, ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.
ಸದ್ಯ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರ ಬಿಡುಗಡೆ ಬಳಿಕ ಚಾಲೆಂಜಿಂಗ್ ಸ್ಟಾರ್ ಐತಿಹಾಸಿಕ ‘ವೀರ ಮದಕರಿ ನಾಯಕ’ನ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಚಿತ್ರವನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದು, ಇನ್ನೂ ಚಿತ್ರೀಕರಣ ಬಾಕಿ ಇರುವುದರಿಂದ ಹಾಗೂ ಐತಿಹಾಸಿಕ ಸಿನಿಮಾಕ್ಕೆ ಹೆಚ್ಚಿನ ಶ್ರಮ ಬೇಕಿರುವುದರಿಂದ ಇದು ತೆರೆ ಕಾಣುವುದು ತಡವಾಗಬಹುದು. ಅಷ್ಟರೊಳಗೇ ದರ್ಶನ್ ಮತ್ತು ರಾಜೇಂದ್ರ ಸಿಂಗ್ ಬಾಬು ಜೋಡಿ ಮತ್ತೊಂದು ವಿಭಿನ್ನ ಚಿತ್ರಕ್ಕೆ ಮುಂದಾಗಿದೆ.
ಹೌದು..! ರಾಜೇಂದ್ರ ಸಿಂಗ್ ಬಾಬು ಅವರು ಸುದೀರ್ಘ ಸಮಯದ ಬಳಿಕ ‘ಗಂಧದಗುಡಿ’ಯಂತಹ ಪರಿಪೂರ್ಣ ಅರಣ್ಯ ಕಥಾನಕವೊಂದನ್ನು ಸಿನಿಮಾ ಮಾಡಲು ಬಯಸಿದ್ದಾರೆ. ಇದರಲ್ಲಿ ದರ್ಶನ್, ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ವಿಶೇಷವೆಂದರೆ ಈ ಚಿತ್ರಕ್ಕೆ ಅವರು ‘ಗಂಧದ ಗುಡಿ’ ಹೆಸರು ಇಡಲು ತೀರ್ಮಾನಿಸಿದ್ದಾರೆ. ಈ ಹಿಂದೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತಂತೆ ‘ಗಂಧದ ಗುಡಿ’ಯ ಎರಡು ಭಾಗಗಳು ಬಂದಿದ್ದವು. ಇದೀಗ ಹೊಸ ಚಿತ್ರ ‘ಅಂತರರಾಷ್ಟ್ರೀಯ ಗಂಧದ ಗುಡಿ’ಯಾಗಿರಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.
ಇದು ಅಂತರಾಷ್ಟ್ರೀಯ ಗಂಧದ ಗುಡಿಯಾಗಲು ಕಾರಣ ಆಫ್ರಿಕಾ, ಹಾಂಕಾಂಗ್ ಮತ್ತು ಲಂಡನ್ ನಡುವೆ ಕಥೆ ಸಾಗಲಿದೆಯಂತೆ. ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದಾರೆ. ದರ್ಶನ್ ನಾಯಕರಾಗಿರುವುದರಿಂದ ಸಿನಿಮಾ ಅಭಿಮಾನಿಗಳಿಗೆ ಭರಪೂರ ಆಕ್ಷನ್ ಮನರಂಜನೆ ಸಿಗುವುದು ಖಾತರಿಯಾಗಿದೆ. ಒಟ್ಟಾರೆ ಐಎಫ್ಎಸ್ ಅಧಿಕಾರಿಯ ಗೆಟಪ್ನಲ್ಲಿ ದರ್ಶನ್ ನಟಿಸುವುದು ಕುತೂಹಲ ಮೂಡಿಸಿದೆ.