ಬೆಂಗಳೂರು: ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಗಲಭೆಯ ಕಿಂಗ್‍ಪಿನ್ ಹಾಗೂ ಕುಮ್ಮಕ್ಕು ನೀಡಿದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನೀಡಿದ್ದ ನೋಟಿಸ್ ನಂತರ ಬಂಧನದ ಭೀತಿಯಿಂದ ಕಳೆದ ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಸಂಪತ್ ರಾಜ್‍ರನ್ನು ಬೆಂಗಳೂರಿನಲ್ಲೇ ಅರೆಸ್ಟ್ ಮಾಡಲಾಗಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಂಪತ್ ರಾಜ್ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಸಂಪತ್‍ರಾಜ್‍ಗೆ 2ನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದರು. ಆದರೆ, ಕೊರೊನಾ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ್ದರಿಂದ ವಿಚಾರಣೆಗೆ ಗೈರು ಹಾಜರಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್ ಮೇಲೆ ಸಿಸಿಬಿ ಪೊಲೀಸರು ನಿಗಾ ಇಟ್ಟಿದ್ದರು. ಆದರೆ, ಸಿಸಿಬಿ ಪೊಲೀಸರಿಗೆ ಚಳ್ಳಹಣ್ಣು ತಿನ್ನಿಸಿ ಡಿಶ್ಚಾರ್ಜ್ ಮಾಡಿಸಿಕೊಂಡು ಸಂಪತ್ ರಾಜ್ ನಾಪತ್ತೆಯಾಗಿದ್ದರು.
ಕಳೆದ ಒಂದು ತಿಂಗಳಿಂದ ಬೆಂಗಳೂರು, ಮೈಸೂರು, ನಾಗರಹೊಳೆ, ಕೇರಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಜಾಗ ಬದಲಾಯಿಸುತ್ತಿದ್ದ ಸಂಪತ್ ರಾಜ್ ಸಿಸಿಬಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಸಂಪತ್ ರಾಜ್ ಬಂಧನವಾದ ವಿಚಾರವಾಗಿ ಹೈಕೋರ್ಟ್ ಸಿಸಿಬಿ ಪೊಲೀಸರ ಮೇಲೆ ಗರಂ ಆಗಿತ್ತು.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂಟ್ರಾಕ್ಟರ್ ಹಾಗೂ ನಾಗರಹೊಳೆ ಮೂಲದ ರಿಯಾಜುದ್ದೀನ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಿಯಾಜುದ್ದೀನ್ ಬಂಧಿಸಿ ವಿಚಾರಣೆ ಸಂಪತ್ ರಾಜ್ ಚಲನವನಗಳ ಬಗ್ಗೆ ಮಾಹಿತಿ ಪಡೆದು ರಾಜಧಾನಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ರಿಯಾಜುದ್ದೀನ್, ಸಂಪತ್ ರಾಜ್ ನಾಗರಹೊಳೆಯಲ್ಲಿ ಅಡಗಿಕೊಳ್ಳಲು ಸಹಾಯ ನೀಡಿದ್ದ. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರಿಯಾಜುದ್ದೀನ್ ಶಿಷ್ಯರ ಜೊತೆ ಸಂಪತ್‍ರಾಜ್ ಓಡಾಡಿಕೊಂಡು ತಲೆಮರೆಸಿಕೊಂಡಿದ್ದ.
ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಸಂಪತ್ ರಾಜ್ ಸಿಸಿಬಿ ಪೊಲೀಸರಿಗೆ ಸಿಗದೇ ನಾಪತ್ತೆಯಾಗಿದ್ದರು. ಸೋಮವರ ರಾತ್ರಿ ಸಂಪತ್ ರಾಜ್‍ರನ್ನು ಬಂಧಿಸಿದ್ದು, ಸಿಸಿಬಿ ಪೊಲೀಸರು ಮಂಗಳವಾರ ಕೋರ್ಟ್‍ಗೆ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಈ ದಿನಕ್ಕಾಗಿ ನಾನು ಕಾದಿದ್ದೆ: ಶಾಸಕ ಅಖಂಡ ಹೇಳಿಕೆ
ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಹಾಗೂ ತಮ್ಮ ಮನೆಗೆ ಬೆಂಕಿ ಹಚ್ಚಿ ಹತ್ಯೆಗೆ ಸಂಚು ರೂಪಿಸಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ ಮಾಡಿದ್ದು ಸಮಾಧಾನ ತಂದಿದೆ ಎಂದು ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು, ಈ ದಿನಕ್ಕಾಗಿ ನಾನು ಕಾದಿದ್ದೆ ಎಂದ ಅಖಂಡ ಶ್ರೀನಿವಾಸಮೂರ್ತಿ, ಪಕ್ಷದಿಂದಲೂ ಸಂಪತ್ ರಾಜ್ ವಿರುದ್ಧ ಕ್ರಮ ಆಗಬೇಕು. ಈ ಸಂಬಂಧ ಕೆಪಿಸಿಸಿ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಮಾತನಾಡುವೆ ಎಂದು
ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








