ರಾಜ್ಯದ ಹಿರಿಯ ರಾಜಕಾರಣಿ ಮತ್ತು ಪ್ರಭಾವಿ ನಾಯಕ ಎಸ್.ಎಂ. ಕೃಷ್ಣ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾದ ಸುದ್ದಿ ರಾಜ್ಯದಾದ್ಯಂತ ದುಃಖದ ಮೋಡವನ್ನು ಉಂಟು ಮಾಡಿದೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಮತ್ತು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಮಾರ್ಗದರ್ಶಕನಿಗೆ ಕಣ್ಣೀರು ತುಂಬಿದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರವನ್ನು ನೋಡಿದಾಗ ತಮ್ಮ ಭಾವನೆಗಳನ್ನು ಹಿಡಿದಿಟ್ಟು ಕೊಳ್ಳಲು ಸಾಧ್ಯವಾಗಲಿಲ್ಲ. ರಾಜಕೀಯ ಜೀವನದಲ್ಲಿ ಡಿಕೆಶಿಗೆ ಸ್ಫೂರ್ತಿಯಾಗಿದ್ದ ಹಾಗೂ ಮಾರ್ಗದರ್ಶನ ನೀಡಿದ ಗುರುವಿನ ಅಗಲಿಕೆ ಅವರಿಗೆ ತುಂಬಾ ಭಾರವಾಗಿತ್ತು.

ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರದ ಬಳಿ ಬಂದು, ಡಿಕೆ ಶಿವಕುಮಾರ್ ಅವರು ಅವರ ಕಾಲಿಗೆ ನಮಿಸಿ ತಮ್ಮ ಅಂತಿಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಈ ವೇಳೆ ಅವರು ಭಾವನಾತ್ಮಕವಾಗಿ ಅತ್ತ ದೃಶ್ಯವು ಸ್ಥಳದಲ್ಲಿದ್ದ ಎಲ್ಲರನ್ನೂ ಭಾವುಕರನ್ನಾಗಿಸಿತು. ಅಳುತ್ತಾ ಅವರು ತಮ್ಮ ರಾಜಕೀಯ ಜೀವನದಲ್ಲಿ ಕೃಷ್ಣ ಅವರ ಕೊಡುಗೆಯನ್ನು ಸ್ಮರಿಸಿದರು. ಕೃಷ್ಣ ಅವರ ಮಾರ್ಗದರ್ಶನದಿಂದ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು, ಗುರುವನ್ನು ಕಳೆದುಕೊಂಡ ನೋವನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ..








