“ತೇಜಸ್ವಿ ಸೂರ್ಯ ಅಮಾವಾಸ್ಯೆ ಗಿರಾಕಿ, ಬೆಡ್ ಬ್ಲಾಕಿಂಗ್ ವಿಷಯಾಂತರ ಪ್ರಯತ್ನ”
ಬೆಂಗಳೂರು : ಸಂಸದ ತೇಜಸ್ವಿ ರ್ಸೂ ಅಮಾವಾಸ್ಯೆ ಗಿರಾಕಿ, ಬೆಡ್ ಬ್ಲಾಕಿಂಗ್ ವಿಷಯಾಂತರ ಪ್ರಯತ್ನ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಸೇರಿ ಬೆಡ್ ಬ್ಲಾಕಿಂಗ್ ಬಗ್ಗೆ ಮಾತನಾಡಿದ್ರು. ಅಲ್ಲಿ 200 ಜನ ಕೆಲಸ ಮಾಡ್ತಾಯಿದ್ರೂ, ಕೇವಲ 17 ಜನರ ಹೆಸರನ್ನು ಮಾತ್ರ ಹೇಳ್ತಾರೆ. ಮಿಕ್ಕಿದವರ ಹೆಸರನ್ನು ಹೇಳೊಕ್ಕೆ ಹೋಗಿಲ್ಲ. ಅವನು ಯಾರೋ ಎಳಸು ತಂದು ಕೂರಿಸಿಕೊಂಡಿದ್ದೀರಾ ಯಡಿಯೂರಪ್ಪ ಎಂದು ಪ್ರಶ್ನಿಸಿದರು.
ತೇಜಸ್ವಿ ಸೂರ್ಯ ಮತ್ತೆ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಅವನು ಬರೀ ಒಂದು ಕೋಮಿನವರ ಹೆಸರುಗಳನ್ನು ಓದುತ್ತಾನೆ. ಅವರು ನನ್ನ ಬ್ರದರ್ಸ್. ಅವರ ಜೊತೆ ನಾವು ಜೀವಿಸುತ್ತೇವೆ, ಸಾಯುತ್ತೇವೆ. ಅವರು ಮಾಂಸ ಕಡಿಲಿಲ್ಲ ಅಂದ್ರೆ ಮಾಂಸ ತಿನ್ನಲ್ಲ. ಅವರು ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಮುಂದಕ್ಕೆ ಹೋಗಲ್ಲ. ತೇಜಸ್ವಿ ಸೂರ್ಯ ಅವರ ಮನೆಯವರು ಗಾಡಿ ರಿಪೇರಿ ಮಾಡಿಸಿಲ್ಲವಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮೊದಲು ಎಂಪಿಯನ್ನ ಬಂಧಿಸಬೇಕು. ಇದಕ್ಕೆ ಕೋಮು ಆಯಾಮ ನೀಡ್ತಾ ಇದಾರೆ ಅವರು. ಅಮವಾಸ್ಯೆ ಗಿರಾಕಿ ಅವನು. ಒನ್ ಟೈಮ್ ಕ್ರಾಪ್ ಅವನು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಅಲ್ಲದೆ ಬೆಡ್ ಬ್ಲಾಕಿಂಗ್ ವಿಷಯಾಂತರ ಮಾಡುವ ಪ್ರಯತ್ನವಾಗಿದೆ. ಚಾಮರಾಜನಗರ ವಿಚಾರ ಮರೆಮಾಚಿ ಬೇರೆ ವಿಚಾರದತ್ತ ಜನರ ಮನಸ್ಸನ್ನು ಹೊರಳಿಸಲು ಇಂತಹ ಬೆಡ್ ಬ್ಲಾಕಿಂಗ್ ವಿಚಾರ ತಂದಿದ್ದಾರೆ. ಅದನ್ನೇ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅದನ್ನೇ ಹೇಳುವುದು ಎಂದರು.