ಬೆಂಗಳೂರು ; ಕೆಪಿಸಿಸಿ ಅಧ್ಯಕ್ಷರಾದ ನಂತರ ಸಖತ್ ಆಕ್ಟೀವ್ ಆಗಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಬೆಂಗಳೂರಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.
ಇಂದು ಬೆಳಗ್ಗೆ ಪಿಪಿಇ ಕಿಟ್ ಸಹಿತವಾಗಿ ಡಿ.ಕೆ.ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್ ಗೆ ತೆರಳಲು ಡಿಕೆಶಿ ಮುಂದಾದರು. ಆಗ ವೈದ್ಯರು ಪ್ರವೇಶವನ್ನು ನಿರಾಕರಿಸಿದರು. ವಾರ್ಡ್ ಗೆ ಭೇಟಿ ನೀಡಿದ್ದರೆ ಏಳು ದಿನ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ಎಚ್ಚರಿಸಿದ್ದರಿಂದ ಡಿಕೆಶಿ ವಾರ್ಡ್ಗೆ ಭೇಟಿ ನೀಡೋದನ್ನ ಕೈ ಬಿಟ್ಟರು.
ಬಳಿಕ ವಿಕ್ಟೋರಿಯಾದ ಆವರಣಕ್ಕೆ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳನ್ನು ಕರೆಸಿ ಸಮಾಲೋಚನೆ ನಡೆಸಿದ ಡಿಕೆಶಿ, ಆಸ್ಪತ್ರೆ ಮುಖ್ಯಸ್ಥರಿಂದ ಚಿಕಿತ್ಸೆ ಮಾಹಿತಿ ಪಡೆದರು. ಜೊತೆಗೆ ಕೆಲವು ಸೋಂಕಿತರನ್ನು ಅಲ್ಲಿಗೆ ಕರೆಸಿ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ನೀಡುತ್ತಿರುವ ಆಹಾರದ ಗುಣಮಟ್ಟವನ್ನು ಶಿವಕುಮಾರ್ ಪರಿಶೀಲನೆ ನಡೆಸಿದರು.
ನಂತರ ಆಸ್ಪತ್ರೆಯಲ್ಲೇ ಇರುವ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಂಕಿತರ ವಾರ್ಡ್ ಗೆ ಸಂಪರ್ಕ ಸಾಧಿಸಿದ ಡಿ.ಕೆ.ಶಿವಕುಮಾರ್ ಅವರು, ಸೋಂಕಿತರು, ವೈದ್ಯರು ಮತ್ತು ನರ್ಸ್ ಗಳ ಜೊತೆ ಸಮಾಲೋಚನೆ ನಡೆಸಿ ಎಲ್ಲರಿಗೂ ಧೈರ್ಯ ತುಂಬಿದರು.








