ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಸಿಡಿದೆದ್ದ ನೌಕರರು
ಬಂಡೀಪುರ ಅರಣ್ಯ ಇಲಾಖೆಯಲ್ಲಿ ಬ್ರಿಟಿಷ್ ಕಾಲದ ಆಡಳಿತ ಮಾದರಿಯಲ್ಲಿ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ ಮೇಲೆ ದಬ್ಬಾಳಿಕೆ ನಡೆಸಲಾಗ್ತಿದೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ. ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ ಪಾಡು ಜೀತ ಪದ್ಧತಿಗಿಂತ ಕಡೆಯಾಗಿದೆ ಎಂದು ಆರೋಪಿಸುತ್ತಾ ನೌಕರರು ಕಳೆದ 3 ದಿನಗಳಿಂದ ಪ್ರತಿಭಟನೆ ಮಾಡುತ್ತಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ನಿರತರಾಗಿರುವ ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ ಅಲ್ಲದೇ ಆರೋಪಗಳ ಮೇಲೆ ಆರೋಪ ಮಾಡ್ತಿದ್ದು, ಅಧಿಕಾರಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಸಹ ಆಕ್ರೋಶಭರಿತವಾಗಿ ನುಡಿದಿದ್ದಾರೆ.
ಇನ್ನೊಂದೆಡೆ ಸಿಬ್ಬಂದಿ ಬೆಂಕಿ, ಮಳೆ ಹಾಗೂ ಕಾಡು ಪ್ರಾಣಿಗಳ ಹಾವಳಿ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಆದ್ರೆ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇರುವುದಿಲ್ಲ. ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ರೂ ಸಿಬ್ಬಂದಿಯ ಸಂಬಳ ಕೇವಲ 11 ಸಾವಿರ. ಇಷ್ಟೆಲ್ಲಾ ಪಡು ಬಿದ್ದು ಕೆಲಸ ಮಾಡ್ತಿರುವ ಸಿಬ್ಬಂದಿಗೆ ದಿನದ 24 ಗಂಟೆಯೂ ದುಡಿಯಿರಿ ಎಂದು ಹೇಳುತ್ತಾ ಅಧಿಕಾರಿಗಳು ಬ್ರಿಟಿಷ್ ಕಾಲದ ಅಧಿಕಾರ ನಡೆಸುತ್ತಿದ್ದಾರೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ದಿನಗೂಲಿ ನೌಕರ ವರದರಾಜು ಎಂಬುವವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಲೆ ಅವರ ಮೇಲೆ ಬಂಡೀಪುರ ಅರಣ್ಯ ಮೂಳೆಯೂರು ವಲಯದ ಅರಣ್ಯಾಧಿಕಾರಿ RFO ಪುಟ್ಟರಾಜು ದರ್ಪ ಮೆರೆದಿದ್ದಾಗಿಯೂ ಆರೋಪಿಸಲಾಗಿದೆ. ಮನೆಗೆ ಹೋಗುತ್ತಿದ್ದ ನೌಕರ ವರದರಾಜು ಎನ್ನುವ ವ್ಯಕ್ತಿಯನ್ನು ಕಚೇರಿಗೆ ಕರೆಸಿಕೊಂಡು ಮಧ್ಯಪಾನವನ್ನು ಮೈಮೇಲೆ ಚೆಲ್ಲಿ ಹಿಂಸೆ ಮಾಡಿದ್ದಾಗಿ ಆರೋಪಿಸಲಾಗಿದೆ.. ಅಲ್ಲದೇ ದಿನಗೂಲಿ ನೌಕರನ ಮೇಲೆ ಆರೋಪ ಒರೆಸಲು ಅನ್ಯಮಾರ್ಗ ಅನುಸರಿಸಿದ್ದರು ಎನ್ನಲಾಗಿದೆ.








