ತ್ರೇತಾಯುಗದ ರಾಮನಂತೆ ಮಾತಿಗೆ ತಪ್ಪದ ದಾಮೋದರ್ ದಾಸ್ ನರೇಂದ್ರ ಮೋದಿ
ಅಯೋಧ್ಯೆ, ಜುಲೈ 31: ಪ್ರಧಾನಿ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಯನ್ನು ಮಾಡಲಿದ್ದಾರೆ. ಜೊತೆಗೆ ಅವರು ಈ ಹಿಂದೆ ಮಾಡಿದ ಮಾತನ್ನು ಸಹ ಈಡೇರಿಸಲಿದ್ದಾರೆ. ಇಂದಿಗೆ ಸರಿಯಾಗಿ 29 ವರ್ಷಗಳ ಹಿಂದೆ 1991ರಲ್ಲಿನ ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ಛಾಯಾಗ್ರಾಹಕರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಪ್ರಾರಂಭವಾಗುವ ದಿನ, ಪುನಃ ಬರುತ್ತೇನೆ ಎಂದು ಹೇಳಿದ್ದರು. 1991ರಲ್ಲಿ ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಜೊತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಛಾಯಾಗ್ರಾಹಕ ಮಹೇಂದ್ರ ತ್ರಿಪಾಠಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಾಮ ಜನ್ಮಭೂಮಿ ಬಳಿ ಫೋಟೋ ಸ್ಟುಡಿಯೋ ನಡೆಸುತ್ತಿರುವ ಮಹೇಂದ್ರ ತ್ರಿಪಾಠಿ, ಅವರು 1991 ರಲ್ಲಿ ಮೋದಿಯವರ ಈ ಅಪರೂಪದ ಛಾಯಾಚಿತ್ರವನ್ನು ತೆಗೆದುಕೊಂಡಿದ್ದಾರೆ ಮತ್ತು ಆ ಸಮಯದಲ್ಲಿ ಅವರು ಮೋದಿಯವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ತ್ರಿಪಾಠಿ ಆ ದಿನವನ್ನು ನೆನಪಿಸಿಕೊಳ್ಳುತ್ತಾ, ಮೋದಿಜೀ 1991 ರ ಏಪ್ರಿಲ್ ನಲ್ಲಿ ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರೊಂದಿಗೆ ಅಯೋಧ್ಯೆಗೆ ಬಂದು ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ನಾನಾಗ ಅಯೋಧ್ಯೆಯ ಏಕೈಕ ಛಾಯಾಗ್ರಾಹಕನಾಗಿದ್ದೆ ಮತ್ತು ವಿಎಚ್‌ಪಿ ಜೊತೆ ಸಂಬಂಧ ಹೊಂದಿದ್ದೆ. ಆ ಸಮಯದಲ್ಲಿ, ನಾನು ಈ ಫೋಟೋವನ್ನು ತೆಗೆದುಕೊಂಡಿದ್ದು, ಗುಜರಾತ್ ನ ಬಿಜೆಪಿ ನಾಯಕರು ಎಂದು ಆಗ ಜೋಶಿ ಅವರು ಮೋದಿಜೀ ಯನ್ನು ಪತ್ರಕರ್ತರಿಗೆ ಪರಿಚಯಿಸಿದರು ಎಂದು ತ್ರಿಪಾಠಿ ಹೇಳಿದರು.
ನಾನು ಮತ್ತು ಸ್ಥಳೀಯ ಪತ್ರಕರ್ತರು ಮೋದಿಜೀ ಅವರನ್ನು ಪುನಃ ಯಾವಾಗ ಬರುತ್ತೀರಿ ಎಂದು ಕೇಳಿದಾಗ, ಅವರು ರಾಮ ಮಂದಿರದ ನಿರ್ಮಾಣ ಪ್ರಾರಂಭವಾಗುವ ದಿನ ನಾನು ಇನ್ನೊಮ್ಮೆ ಬರುತ್ತೇನೆ ಎಂದು ಉತ್ತರಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜ ಕಾರ್ಯಕ್ರಮದಲ್ಲಿ ಇದೀಗ ಕಾಕತಾಳೀಯವಾಗಿ ಮೋದಿಜೀ ಭಾಗವಹಿಸುತ್ತಿದ್ದಾರೆ ಎಂದು ತ್ರಿಪಾಠಿ ಹೇಳಿದರು. ಆದರೆ, ಭೂಮಿ ಪೂಜ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸದಿರುವ ಬಗ್ಗೆ ಕೋಪಗೊಂಡಿರುವ ತ್ರಿಪಾಠಿ ಅವರು 1989 ರಿಂದ ವಿಶ್ವ ಹಿಂದೂ ಪರಿಷತ್ ಗಾಗಿ ಛಾಯಾಗ್ರಹಣ ಮಾಡುತ್ತಿದ್ದೇನೆ. ಅಯೋಧ್ಯೆಯ ತೀರ್ಪಿನಲ್ಲಿ ನನ್ನ ಛಾಯಾಚಿತ್ರಗಳು ಸಹ ಪ್ರಮುಖ ಪಾತ್ರವಹಿಸಿವೆ, ಇದರ ಹೊರತಾಗಿಯೂ ನನ್ನನ್ನು ಭೂಮಿ ಪೂಜ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ ಎಂದು ಹೇಳಿದರು.