
ದಕ್ಷಿಣ ಕನ್ನಡ ; ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎನ್ಮಡ್ಕದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಕಳೆದ ಮೂರು ನಾಲ್ಕು ದಿನಗಳಿಂದ ಐದಾರು ಕಾಡಾನೆಗಳು ರಾತ್ರಿ ವೇಳೆ ತೋಟಕ್ಕೆ ನುಗ್ಗಿ, ಬಾಳೆ, ಅಡಿಕೆ ಹಾಗೂ ತೆಂಗಿನ ಮರಗಳನ್ನು ಧ್ವಂಸ ಮಾಡಿವೆ.

ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಈ ಪ್ರದೇಶದ ಜನರು ಕಾಡಾನೆಗಳ ಹಾವಳಿಯಿಂದ ಆತಂಕಗೊಂಡಿದ್ದಾರೆ. ಇಷ್ಟು ದಿನ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಇಲ್ಲಿನ ಜನರು ಈಗ ಕಾಡಾನೆಗಳ ಭಯದಲ್ಲಿದ್ದಾರೆ. ಯಾಕಂದ್ರೆ ಇಲ್ಲಿನ ಪ್ರದೇಶಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿರುವುದು ತೀರಾ ಕಮ್ಮಿ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಅರಣ್ಯದಂಚಿನ ಪ್ರದೇಶದಲ್ಲಿರುವ ತೋಟಗಳಿಗೆ ಕಾಡಾನೆಗಳು ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿವೆ.

ಕಾಡಾನೆಗಳ ಹಾವಳಿ ಬಗ್ಗೆ ಇಲ್ಲಿನ ಜನರ ಈಗಾಗಲೇ ಅರಣ್ಯಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಕೊಕ್ಕಡ ವಲಯ ಅರಣ್ಯ ಅಧಿಕಾರಿ ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.








