ಉಡುಪಿ : ಇಂದು ಕರಾವಳಿಗೆ ಕರಾಳ ಗುರುವಾರ ಆಗುವ ಎಲ್ಲಾ ಸಾಧ್ಯತೆಗಳಿವೆ. ಕರಾವಳಿಯ ಮೂರು ಜಿಲ್ಲಾಡಳಿತಗಳು ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿವೆ. ಈ ಜಿಲ್ಲೆಗಳಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ.
ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತಗಳು ನಿರೀಕ್ಷೆ ಮಾಡುತ್ತಿವೆ. ಡಿಎಚ್ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಇದರಲ್ಲಿ 40 ಮಂದಿಗೆ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ದಕ್ಷಿಣ ಕನ್ನಡದಲ್ಲಿ 6, ಉಡುಪಿಯಲ್ಲಿ 25, ಉತ್ತರ ಕನ್ನಡದಲ್ಲಿ 9 ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿದುಬಂದಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 ಪ್ರಯಾಣಿಕರ, ನಿನ್ನೆ ಮಸ್ಕತ್ ನಿಂದ ಬಂದ 21 ಪ್ರಯಾಣಿಕರ ಗಂಟಲು ದ್ರವ ತೆಗೆದು ಪರೀಕ್ಷೆಗೆ ನೀಡಲಾಗಿದೆ. ಒಟ್ಟಾರೆ ಇಂದು ಕರಾವಳಿಗೆ ಕರಾಳ ಗುರುವಾರವಾಗುವ ಎಲ್ಲಾ ಸಾಧ್ಯತೆಗಳಿವೆ.