ಬಳ್ಳಾರಿ: ಬರೋಬ್ಬರಿ 132 ದಿನಗಳ ನಂತರ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಜೈಕಾರ ಹಾಕುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ದರ್ಶನ್ ಬಿಡುಗಡೆಯಾಗುವ ಸುದ್ದಿ ಕೇಳಿ ಜೈಲಿನ ಹತ್ತಿರ ಅಭಿಮಾನಿಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದರ್ಶನ್ ಹೊರಡುವ ವಾಹನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳ್ಳಾರಿ ದಾಟುವ ವರೆಗೂ ಪೊಲೀಸ್ ಭದ್ರತೆ ಇರಲಿದೆ. ಇಬ್ಬರು ಸಿಪಿಐ, ನಾಲ್ವರು ಪಿಎಸ್ ಐ ಹಾಗೂ 50 ಪೊಲೀಸರ ಭದ್ರತೆ, ಒಂದು ಪೊಲೀಸ್ ವಾಹನ ಬೆಂಗಳೂರಿನವರೆಗೂ ತೆರಳಬಹುದು ಎನ್ನಲಾಗಿದೆ.
ದರ್ಶನ್ ಹೊಸ ಬಟ್ಟೆ ಧರಿಸಿ ಜೈಲಿನಿಂದ ಹೊರ ಬಂದಿದ್ದಾರೆ. ಬೆನ್ನುನೋವಿನಿಂದಾಗಿ ಅವರು ಕುಟುಂತ್ತಲೇ ಹೊರಗೆ ಬಂದಿದ್ದಾರೆ. ಪತಿಗಾಗಿ ವಿಜಯಲಕ್ಷ್ಮಿ ಅವರು ಹೊರಗಡೆ ಕಾದು ಕುಳಿತಿದ್ದರು. ದರ್ಶನ್ ಹೊರಬರುತ್ತಿದ್ದಂತೆ ಕುಟುಂಬಸ್ಥರು ಈಡುಗಾಯಿ ನೀವಳಿಸಿ ದೃಷ್ಟಿ ತೆಗೆದರು.
ನಟ ದರ್ಶನ್ ಹೊರಬಂದಿದ್ದನ್ನು ಕಂಡ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿರುವುದನ್ನು ಕಂಡು ಒಂದುಕ್ಷಣ ದರ್ಶನ್ ಶಾಕ್ ಆಗಿದ್ದರು. ಭಾರಿ ಭದ್ರತೆಯೊಂದಿಗೆ ದರ್ಶನ್ರನ್ನು ಕಾರಿಗೆ ಹತ್ತಿಸಲಾಯಿತು. ಬೆನ್ನು ನೋವು ಇರುವುದರಿಂದ ಕಷ್ಟ ಪಟ್ಟು ಕಾರು ಹತ್ತಿದರು.
ದರ್ಶನ್ ಕಾರು ಪ್ರಯಾಣ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ನಿಂತು ನಟನನ್ನು ಕಂಡು ಖುಷಿ ಪಟ್ಟಿದ್ದಾರೆ. ಅನೇಕ ಅಭಿಮಾನಿಗಳು ದರ್ಶನ್ ಪ್ರಯಾಣಿಸುತ್ತಿದ್ದ ಕಾರನ್ನೇ ಹಿಂಬಾಲಿಸಿದ್ದಾರೆ.