ನೀತಿ ಆಯೋಗದೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಚರ್ಚೆ
ಬೆಂಗಳೂರು/ದೆಹಲಿ: ಮೇಲುಕೋಟೆ ವಿಧಾನಸಭೆ ಕ್ಷೇತ್ರ ಹಾಗೂ ಕರ್ನಾಟಕದ ಸಮಗ್ರ ಹಾಗೂ ಸರ್ವಾಂಗೀಣ ಪ್ರಗತಿಯ ಗುರಿಯೊಂದಿಗೆ, ತಂತ್ರಜ್ಞಾನ ಆಧಾರಿತ ಕೃಷಿ ಸುಧಾರಣೆ ಮತ್ತು ಗ್ರಾಮೀಣ ಆರ್ಥಿಕತೆಯ ಸಬಲೀಕರಣದ ಕುರಿತು ದೆಹಲಿಯಲ್ಲಿ ನೀತಿ ಆಯೋಗದ ಉನ್ನತ ಅಧಿಕಾರಿಗಳೊಂದಿಗೆ ಮೇಲುಕೋಟೆ ಶಾಸಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಮುಖ ಸಭೆ ನಡೆಸಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ನೀತಿ ಆಯೋಗದೊಂದಿಗೆ ಚರ್ಚಿಸಲಾದ ಪ್ರಮುಖ ವಿಷಯಗಳು ಇಲ್ಲಿವೆ:
ಡಿಜಿಟಲ್ ಕೃಷಿ ಕ್ರಾಂತಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಡಿಜಿಟಲೀಕರಣ, ರೈತರ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೇಡಿಕೆ ಜೋಡಣೆ (Demand Matching) ಹಾಗೂ ನಬಾರ್ಡ್ ಸಹಭಾಗಿತ್ವದ ಕುರಿತು ವಿಸ್ತೃತ ಪ್ರೆಸೆಂಟೇಶನ್ ನೀಡಲಾಗಿದೆ.
ಮಹಿಳಾ ಕೃಷಿ-ಉದ್ಯಮಶೀಲತೆ (Agripreneurs): ಐಸಿಎಆರ್ (ICAR) ಮತ್ತು ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಸ್ಥಳೀಯ ಸಂಸ್ಕರಣಾ ಘಟಕಗಳು (Processing Units) ಹಾಗೂ ‘ಫಾರ್ಮ್ ಟು ಮಾರ್ಕೆಟ್’ ವ್ಯವಸ್ಥೆಯನ್ನು ರೂಪಿಸುವುದು.
ಗ್ರಾಮೀಣ ಪ್ರವಾಸೋದ್ಯಮ (Rural & Farm Tourism): ರೈತರ ಮನೆ ಹಾಗೂ ತೋಟಗಳಲ್ಲಿ ಹೋಂ-ಸ್ಟೇಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಿ, ರೈತರಿಗೆ ಹೆಚ್ಚುವರಿ ಆದಾಯ ಕಲ್ಪಿಸುವುದು.
ಪಾಂಡವಪುರ ಹಾಗೂ ಸಣ್ಣ ನಗರಗಳ ಸ್ಮಾರ್ಟ್ ಅಭಿವೃದ್ಧಿ: ಶಾಲಾ ಮಕ್ಕಳ ಬಸ್ ಮಾರ್ಗಗಳ ವ್ಯವಸ್ಥೆ ಸೇರಿದಂತೆ ಸಂಚಾರ ಸುಧಾರಣೆಗೆ ಡೇಟಾ ಆಧಾರಿತ ಸಾರಿಗೆ (Mobility) ಯೋಜನೆ ಮತ್ತು ‘ಬೀಜ ಬ್ಯಾಂಕ್ ಗ್ರಾಮ’ (Seed Bank Village) ಪರಿಕಲ್ಪನೆಗಳ ಅನುಷ್ಠಾನ.
ರೈತ ಪರ 6 ಸಮಗ್ರ ಕೃಷಿ ಮಸೂದೆಗಳು: ರೈತರ ಆಮೂಲಾಗ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಹಾಗೂ ಮೌಲ್ಯ ಸರಪಳಿಯ ವ್ಯವಸ್ಥಿತ ಮರುರೂಪಣೆಯ ಮೂಲಕ ರೈತರು ಆರ್ಥಿಕವಾಗಿ ಸ್ಥಿರವಾಗಿರುವಂತೆ ಖಚಿತಪಡಿಸುವುದು ಈ ಎಲ್ಲಾ ಪ್ರಯತ್ನಗಳ ಮುಖ್ಯ ಆಶಯವಾಗಿದೆ. ಇದಕ್ಕಾಗಿ ರೈತರ ಆರ್ಥಿಕ ಸಾರ್ವಭೌಮತ್ವ, ಸಹಕಾರಿ ಸಂಘಗಳ ಪ್ರಜಾಸತ್ತಾತ್ಮಕ ಆಡಳಿತ, ಎಂಎಸ್ಪಿ ಬದಲು ಬೆಲೆ ನಿಗದಿ ಸ್ವಾತಂತ್ರ್ಯ, ಭೂ ಹಕ್ಕುಗಳು ಮತ್ತು ಸ್ವಾಧೀನ ಸಮಾನತೆ, ಸಾಲ ತಡೆಗಟ್ಟುವಿಕೆ ಹಾಗೂ ಹವಾಮಾನ ಅಪಾಯದಿಂದ ರಕ್ಷಣೆ ನೀಡುವ 6 ಸಮಗ್ರ ಕೃಷಿ ಮಸೂದೆಗಳನ್ನು ಸಿದ್ಧಪಡಿಸಲಾಗಿದೆ.
ಜೊತೆಗೆ, ಆಡಳಿತ ಮಸೂದೆಗಳು, ರೈತ ಮಸೂದೆಗಳು, ಹವಾಮಾನ ಮಸೂದೆ ಹಾಗೂ ಯುವ ಉದ್ಯೋಗ ಮಸೂದೆಗಳನ್ನು ಸಿದ್ಧಪಡಿಸಲಾಗಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕ ನೀತಿಗಳಲ್ಲಿ ಆಗಬೇಕಾದ ಆಮೂಲಾಗ್ರ ಪರಿವರ್ತನೆ ಕುರಿತ ವಿಷಯಗಳನ್ನು ಮಂಡಿಸಲಾಗಿದೆ. ವ್ಯವಸ್ಥಿತ ಬದಲಾವಣೆಗಳ ಮೂಲಕ ಕೃಷಿ ಸಮುದಾಯಕ್ಕೆ ಬಲ ತುಂಬಲು ಮತ್ತು ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಬದ್ಧವಾಗಿರುವುದಾಗಿ ಶಾಸಕರು ತಿಳಿಸಿದ್ದಾರೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಕರ್ನಾಟಕ 2.0 www.ktkgov2.org ಲಿಂಕ್ ಅನ್ನು ಬಳಸಬಹುದು ಎಂದು ತಿಳಿಸಲಾಗಿದೆ.







