ಬೆಂಗಳೂರು: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಡೆತನದ ಪ್ರತಿಷ್ಠಿತ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ತನ್ನ ಅದ್ದೂರಿ ಪ್ರದರ್ಶನವನ್ನು ಆರಂಭಿಸಿದೆ. ಗಾಂಧಿನಗರದ ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ತಲೆ ಎತ್ತಿರುವ ಈ ಐಷಾರಾಮಿ ಮಲ್ಟಿಪ್ಲೆಕ್ಸ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೂ ಕನ್ನಡದ ಸ್ಟಾರ್ ನಟ ದರ್ಶನ್ ಅವರ ವಿಷಯವಾಗಿ ಹೊಸದೊಂದು ವಿವಾದ ಮತ್ತು ಚರ್ಚೆ ಹುಟ್ಟುಹಾಕಿದೆ.
ಕಪಾಲಿ ಜಾಗದಲ್ಲಿ ಎಎಂಬಿ ವೈಭವ
ಹೈದರಾಬಾದ್‌ನಲ್ಲಿ ಈಗಾಗಲೇ ಜನಪ್ರಿಯವಾಗಿರುವ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದೆ. ಅತ್ಯಾಧುನಿಕ ತಂತ್ರಜ್ಞಾನ, ಲೇಸರ್ ಪ್ರೊಜೆಕ್ಷನ್, ಡಾಲ್ಬಿ ಅಟ್ಮಾಸ್ ಸೌಂಡ್ ಸಿಸ್ಟಮ್, ಮತ್ತು ಐಷಾರಾಮಿ ಆಸನ ವ್ಯವಸ್ಥೆಗಳೊಂದಿಗೆ ಪ್ರೇಕ್ಷಕರಿಗೆ ವಿಶ್ವದರ್ಜೆಯ ಸಿನಿಮಾ ಅನುಭವ ನೀಡಲು ಎಎಂಬಿ ಸಜ್ಜಾಗಿದೆ. ಕೇವಲ ಸಿನಿಮಾ ಪ್ರದರ್ಶನವಲ್ಲದೆ, ಅತ್ಯುತ್ತಮ ಇಂಟೀರಿಯರ್ ಡೆಕೊರೇಷನ್ ಮತ್ತು ಗುಣಮಟ್ಟದ ಆಹಾರ ವಿಭಾಗವನ್ನೂ ಇದು ಒಳಗೊಂಡಿದೆ.
ಕನ್ನಡ ತಾರೆಯರ ಗ್ಯಾಲರಿಯಲ್ಲಿ ದರ್ಶನ್ ನಾಪತ್ತೆ
ಈ ಮಲ್ಟಿಪ್ಲೆಕ್ಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಅಲ್ಲಿನ ಆರ್ಟಿಸ್ಟ್ ಗ್ಯಾಲರಿ. ಇಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಪ್ರಸ್ತುತ ಸೂಪರ್ ಸ್ಟಾರ್‌ಗಳ ಭಾವಚಿತ್ರಗಳನ್ನು ಅಳವಡಿಸಿ ಗೌರವ ಸೂಚಿಸಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಫೋಟೋಗಳು ಗೋಡೆಯ ಮೇಲೆ ರಾರಜಿಸುತ್ತಿವೆ. ಆದರೆ, ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರಮುಖ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಮಾತ್ರ ಇಲ್ಲಿ ಎಲ್ಲಿಯೂ ಕಾಣಸಿಗುತ್ತಿಲ್ಲ.
ನಿರ್ದೇಶಕ ರವಿ ಶ್ರೀವತ್ಸ ಅಸಮಾಧಾನ
ದರ್ಶನ್ ಫೋಟೋ ಇಲ್ಲದಿರುವ ವಿಚಾರ ಬೆಳಕಿಗೆ ಬಂದಿದ್ದು ನಿರ್ದೇಶಕ ರವಿ ಶ್ರೀವತ್ಸ ಅವರ ಭೇಟಿಯ ನಂತರ. ಇತ್ತೀಚೆಗೆ ಎಎಂಬಿ ಸಿನಿಮಾಸ್ ಗೆ ಭೇಟಿ ನೀಡಿದ್ದ ಅವರು, ಮಲ್ಟಿಪ್ಲೆಕ್ಸ್ ಗುಣಮಟ್ಟವನ್ನು ಶ್ಲಾಘಿಸಿದರಾದರೂ, ದರ್ಶನ್ ಫೋಟೋ ಇಲ್ಲದಿರುವುದಕ್ಕೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಹೇಶ್ ಬಾಬು ಅವರೇ ಬೆಂಗಳೂರಿಗೆ ಸ್ವಾಗತ. ಎಎಂಬಿ ಸ್ಕ್ರೀನ್ಸ್‌ಗೆ ಭೇಟಿ ನೀಡಿದ್ದೆ, ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ಧನ್ಯವಾದಗಳು. ಆದರೆ ಆರ್ಟಿಸ್ಟ್ ಗ್ಯಾಲರಿಯಲ್ಲಿ ದರ್ಶನ್ ಅವರ ಫೋಟೋ ಮಿಸ್ ಆಗಿದೆ, ಇದು ನೋಡಿ ತುಂಬಾ ಬೇಸರವಾಯ್ತು ಎಂದು ಉಲ್ಲೇಖಿಸಿದ್ದಾರೆ.
ಕೈಬಿಡಲು ಕಾರಣವಾದ ರೇಣುಕಾ ಸ್ವಾಮಿ ಪ್ರಕರಣ?
ದರ್ಶನ್ ಅವರ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಸದ್ಯ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾರೆ. ಗಂಭೀರ ಸ್ವರೂಪದ ಕೊಲೆ ಆರೋಪ ಹೊತ್ತಿರುವ ವ್ಯಕ್ತಿಯ ಭಾವಚಿತ್ರವನ್ನು ಸಾರ್ವಜನಿಕವಾಗಿ, ಅದೂ ಕಲಾವಿದರ ಗ್ಯಾಲರಿಯಲ್ಲಿ ಪ್ರದರ್ಶಿಸುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಎಎಂಬಿ ಆಡಳಿತ ಮಂಡಳಿ ಬಂದಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, ಮಹೇಶ್ ಬಾಬು ಅವರ ಹೊಸ ಉದ್ಯಮ ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದರೂ, ದರ್ಶನ್ ಅಭಿಮಾನಿ ವಲಯದಲ್ಲಿ ಮಾತ್ರ ತಮ್ಮ ನೆಚ್ಚಿನ ನಟನ ಫೋಟೋ ಇಲ್ಲದ ನಡೆ ಅಸಮಾಧಾನಕ್ಕೆ ಕಾರಣವಾಗಿದೆ.








