ತಂದೆಯೊಂದಿಗೆ ಜೀವಿಸದ ಮಗಳು ಯಾವುದೇ ವೆಚ್ಚ ಪಡೆಯಲು ಅರ್ಹತೆ ಇರುವುದಿಲ್ಲ – ಸುಪ್ರೀಂ…
ಮಗಳು ತನ್ನ ತಂದೆಯೊಂದಿಗೆ ಯಾವುದೇ ರೀತಿಯ ಭಾಂದವ್ಯ ಮತ್ತು ಸಂಬಂಧವನ್ನು ಹೊಂದಲು ಬಯಸದಿದ್ದರೆ, ತಂದೆಯಿಂದ ಯಾವುದೇ ವೆಚ್ಚವನ್ನು ತೆಗೆದುಕೊಳ್ಳಲು ಮಗಳಿಗೆ ಅರ್ಹತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ವಿಚ್ಚೇಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧದಲ್ಲಿನ ಕಹಿ ಕಾರಣದಿಂದ ಹೆಂಡತಿಗೆ ವಿಚ್ಛೇದನ ನೀಡಲು ಅರ್ಜಿದಾರ ಪತಿಗೆ ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ ಎರಡು ತಿಂಗಳೊಳಗೆ ನ್ಯಾಯಾಲಯಕ್ಕೆ 10 ಲಕ್ಷ ರೂಪಾಯಿ ಠೇವಣಿ ಇಡುವಂತೆ ಸೂಚಿಸಿದೆ. ಈ ಮೊತ್ತವನ್ನು ಮುಂದಿನ ಜೀವನಾಂಶಕ್ಕಾಗಿ ಪತ್ನಿಗೆ ನೀಡಲಾಗುವುದು.
ಈ ಸಂದರ್ಭದಲ್ಲಿ ಕೋರ್ಟ್ 20 ವರ್ಷದ ಮಗಳ ಶಿಕ್ಷಣ ಮತ್ತು ಮದುವೆ ವೆಚ್ಚದ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿತು. ಮಗಳ ನಿಲುವಿನಿಂದ ಅವಳು ತನ್ನ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಂದಿನ ದಾರಿಯನ್ನು ಆರಿಸಿಕೊಳ್ಳಲು ಅವಳಿಗೆ ಎಲ್ಲ ಹಕ್ಕಿದೆ. ಮಗಳು ಯಾರೊಂದಿಗೆ ಇರಬೇಕು ಎಂಬುದು ಆಕೆಯ ನಿರ್ಧಾರ. ಈ ಪ್ರಕರಣದಲ್ಲಿ ತಂದೆಯಿಂದ ಯಾವುದೇ ವೆಚ್ಚವನ್ನು ಪಡೆಯಲು ಆಕೆಗೆ ಅರ್ಹತೆ ಇರುವುದಿಲ್ಲ. ಆದರೆ, ತಂದೆ ಬೇಕಾದರೆ ಮಗಳಿಗಾಗಿ ಹಣ ನೀಡಬಹುದು, ನ್ಯಾಯಾಲಯಕ್ಕೆ ಇದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.








