ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇರಳ ಸಿಎಂ ಪಿಣರಾಯಿ ಪುತ್ರಿ
ತಿರುವನಂತಪುರಂ, ಜೂನ್ 15: ಕೇರಳದ ಮುಖ್ಯಮಂತ್ರಿ ಪಿಣರಾಯಿ ಮತ್ತು ಕಮಲಾ ವಿಜಯನ್ ದಂಪತಿಗಳ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರ ವಿವಾಹ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ರಿಯಾಸ್ ರೊಂದಿಗೆ
ಸಿಎಂ ಪಿಣರಾಯಿ ಅವರ ಅಧಿಕೃತ ನಿವಾಸದಲ್ಲಿ ಸರಳವಾಗಿ ನೆರವೇರಿದೆ.
ಎರಡೂ ಕುಟುಂಬಗಳ ಆಪ್ತರು ಸೇರಿದಂತೆ ಸುಮಾರು 50 ಸದಸ್ಯರ ಸಮ್ಮುಖದಲ್ಲಿ ರಿಜಿಸ್ಟರ್ ವಿವಾಹವಾಗುವುದರ ಮೂಲಕ ಇವರು ಇಂದು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಇಂದು ಬೆಳಿಗ್ಗೆ 10.30 ಕ್ಕೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸವಾದ ಕ್ಲಿಫ್ ಹೌಸ್‌ನಲ್ಲಿ ವಿವಾಹ ಕಾರ್ಯ ನಡೆಯಿತು
ವೀಣಾ ಮತ್ತು ರಿಯಾಜ್, ಇಬ್ಬರಿಗೂ ಇದು ಎರಡನೇ ಮದುವೆ.
ರಿಯಾಜ್ ಅವರಿಗೆ 2002ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷಗಳ ಬಳಿಕ ರಿಯಾಜ್ ವಿಚ್ಛೇದನ ಪಡೆದಿದ್ದರು. ವೀಣಾರಿಗೆ ಕೂಡ ಮೊದಲನೆಯ ಮದುವೆಯಿಂದ ಒಂದು ಮಗುವಿದ್ದು, ಮೂರು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದಾರೆ. ಕೇರಳ ಸಿಎಂ ಪಿಣರಾಯಿ ಅವರ ಮಗಳು ವೀಣಾ ಬೆಂಗಳೂರಿನಲ್ಲಿ ನೆಲೆಸಿದ್ದು, 6 ವರ್ಷಗಳ ಹಿಂದೆ ಎಕ್ಸ್ ಲಾಜಿಕ್ ಎಂಬ ಐಟಿ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.