ಸೋನಿಪತ್: ಮನುಷ್ಯ ಸಂಬಂಧಗಳು ಎಷ್ಟು ಯಾಂತ್ರಿಕವಾಗಿವೆ ಎನ್ನುವುದಕ್ಕೆ ಹರ್ಯಾಣದ ಸೋನಿಪತ್ನಲ್ಲಿ ನಡೆದ ಈ ಕರುಣಾಜನಕ ಘಟನೆಯೇ ಸಾಕ್ಷಿ. ತಮ್ಮ ಇಡೀ ಜೀವನವನ್ನೇ ಮಕ್ಕಳ ಭವಿಷ್ಯಕ್ಕಾಗಿ ಮುಡಿಪಾಗಿಟ್ಟ ತಂದೆಯೊಬ್ಬರು ಕೊನೆಗೆ ಅನಾಥವಾಗಿ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ, ಮೂವರು ಸುಶಿಕ್ಷಿತ ಹೆಣ್ಣುಮಕ್ಕಳಿದ್ದರೂ ಸಹ ಒಬ್ಬರೂ ಅಂತ್ಯಕ್ರಿಯೆಗೆ ಬರದೆ ವಿಡಿಯೋ ಕಾಲ್ ಮೂಲಕ ಅಂತಿಮ ದರ್ಶನ ಪಡೆದು ಮಾನವೀಯತೆಯನ್ನೇ ಮರೆತಿದ್ದಾರೆ.
ಮೃತ ವ್ಯಕ್ತಿಯನ್ನು ಮೂಲತಃ ಮುಂಬೈನ ಬಟ್ಟೆ ವ್ಯಾಪಾರಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಇವರು ಹರ್ಯಾಣದ ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ವಾಸವಿದ್ದರು. ಇವರ ಜೊತೆಗಿದ್ದ ಪತ್ನಿ ಮೀನಾ ಅವರು ಕೆಲ ತಿಂಗಳುಗಳ ಹಿಂದಷ್ಟೇ ನಿಧನರಾಗಿದ್ದರು. ಮಂಗಳವಾರ ತಡರಾತ್ರಿ ಶಿವಚರಣ್ ಅವರು ಅನಾರೋಗ್ಯದಿಂದ ವೃದ್ಧಾಶ್ರಮದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗುಪ್ತಾ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದು, ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿ ವಿವಾಹ ಮಾಡಿಕೊಟ್ಟಿದ್ದರು. ಇಬ್ಬರು ಪುತ್ರಿಯರು ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬಳು ನೇಪಾಳದಲ್ಲಿದ್ದರೆ, ಇನ್ನೊಬ್ಬಳು ಉತ್ತರ ಪ್ರದೇಶದಲ್ಲಿ ಹಾಗೂ ಮತ್ತೊಬ್ಬಳು ಮುಂಬೈನಲ್ಲಿ ನೆಲೆಸಿದ್ದಾರೆ. ಗುಪ್ತಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ 20 ದಿನಗಳ ಮೊದಲೇ ವೃದ್ಧಾಶ್ರಮದ ಆಡಳಿತ ಮಂಡಳಿ ಮಕ್ಕಳಿಗೆ ಮಾಹಿತಿ ನೀಡಿತ್ತು. ಆದರೂ ಯಾವೊಬ್ಬ ಮಗಳೂ ತಂದೆಯನ್ನು ನೋಡಲು ಬರಲಿಲ್ಲ.
ಸಾವಿನ ಸುದ್ದಿ ತಿಳಿದ ಮೇಲೂ ಮಕ್ಕಳು ವೃದ್ಧಾಶ್ರಮಕ್ಕೆ ಬರಲು ಸಿದ್ಧರಿರಲಿಲ್ಲ. ಬದಲಿಗೆ ವಿಡಿಯೋ ಕಾಲ್ ಮಾಡುವಂತೆ ತಿಳಿಸಿ, ಮೊಬೈಲ್ ಪರದೆಯ ಮೂಲಕವೇ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದ್ದಾರೆ. ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರು ಸ್ಥಳೀಯರ ನೆರವಿನಿಂದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅಮಾನವೀಯತೆಯ ಪರಮಾವಧಿ ಎಂದರೆ, ಅಂತ್ಯಕ್ರಿಯೆಯ ನಂತರ ತಂದೆಯ ಚಿತಾಭಸ್ಮವನ್ನಾದರೂ ತೆಗೆದುಕೊಂಡು ಹೋಗಿ ಎಂದರೆ, ನಮಗೆ ಅಲ್ಲಿಗೆ ಬರಲು ಸಮಯವಿಲ್ಲ ಎಂದು ಮಕ್ಕಳು ಉತ್ತರಿಸಿದ್ದಾರೆ. ನೀವೇ ಗಂಗಾ ನದಿಯಲ್ಲಿ ವಿಸರ್ಜಿಸಿ ಎಂದು ಹೇಳಿದ್ದಾರೆ. ನೇಪಾಳದಲ್ಲಿರುವ ಶಿಕ್ಷಕಿ ಮಗಳು ಅಂತ್ಯಕ್ರಿಯೆಯ ಖರ್ಚಿಗಾಗಿ ಆನ್ಲೈನ್ ಮೂಲಕ 5001 ರೂಪಾಯಿ ಕಳುಹಿಸಿ ತನ್ನ ಜವಾಬ್ದಾರಿ ಮುಗಿದಿದೆ ಎಂದು ಕೈತೊಳೆದುಕೊಂಡಿದ್ದಾಳೆ.
ಮಕ್ಕಳ ಈ ನಡೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಲಿಸಿದ ವಿದ್ಯೆ ಮತ್ತು ಪಡೆದ ಶಿಕ್ಷಣ ಇಂತಹ ಕಟುಕತನವನ್ನು ಕಲಿಸಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.







