ರಕ್ಷಣೆಗಾಗಿ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮೊರೆ ಹೋದ ದಾವೂದ್ ಇಬ್ರಾಹಿಂ
ಇಸ್ಲಾಮಾಬಾದ್, ಅಗಸ್ಟ್26: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ತನಗೆ ರಕ್ಷಣೆ ನೀಡುವಂತೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮೊರೆ ಹೋಗಿದ್ದಾನೆ ಎಂದು ವರದಿಯಾಗಿದೆ.
1990 ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ತನ್ನ ಸುರಕ್ಷತೆಗಾಗಿ ಪಾಕಿಸ್ತಾನದ ಕೆಲವು ಮಿಲಿಟರಿ ಅಧಿಕಾರಿಗಳ ಜೊತೆ ಕರೆ ಮಾಡಿ ಮಾತುಕತೆ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಅವನು ಕೆಲವು ಐಎಸ್ಐ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರ ಸಹಾಯವನ್ನು ಕೋರಿದ್ದಾನೆ ಎಂದು ವರದಿ ತಿಳಿಸಿದೆ. ಆತ ತನ್ನ ಸಹೋದರ ಅನೀಸ್ ಇಬ್ರಾಹಿಂ, ಸಹಾಯಕ ಶಕೀಲ್ ಬಾಬು ಮಿಯಾ ಶೇಖ್ ಕೂಡ ಹಲವಾರು ಬಾರಿ ಕರೆ ಮಾಡಿ ಮಾತುಕತೆ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಕರಾಚಿಯ ಅತ್ಯಂತ ಐಷಾರಾಮಿ ಹಾಗೂ ಸುರಕ್ಷಿತ ಪ್ರದೇಶವಾದ ಸೇನಾ ವಸತಿ ಪ್ರಾಧಿಕಾರಕ್ಕೆ ಸೇರಿದ ಸ್ಥಳದಲ್ಲಿ ಈತನ ಐಶಾರಾಮಿ ಅರಮನೆಯಿದ್ದು, ಹಿರಿಯ ಸೇನಾಧಿಕಾರಿಗಳು ಕೂಡ ಅಲ್ಲಿ ನೆಲೆಸಿದ್ದಾರೆ. ದಾವೂದ್ ಇಬ್ರಾಹಿಂನ ಬಂಗಲೆಯ ಸುತ್ತ ಭಾರಿ ಬಿಗಿಭದ್ರತೆ ಒದಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.