ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಇ,ಡಿ ವಶಕ್ಕೆ…
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಥಾಣೆ ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡಿದೆ.
ಕಸ್ಕರ್ ಅವರನ್ನು ಮುಂಬೈನಲ್ಲಿರುವ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ವಿಶೇಷ ನ್ಯಾಯಾಲಯಕ್ಕೆ ಒಂದು ದಿನದ ನಂತರ ಹಾಜರುಪಡಿಸಲಾಗುವುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಾಲಯ ಕಸ್ಕರ್ ವಿರುದ್ಧ ಪ್ರೊಡಕ್ಷನ್ ವಾರೆಂಟ್ ಜಾರಿ ಮಾಡಿತ್ತು. ಅನೇಕ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಸ್ಕರ್ ಪ್ರಸ್ತುತ ಥಾಣೆ ಜೈಲಿನಲ್ಲಿ ಬಂದಿತರಾಗಿದ್ದಾರೆ.
ಪ್ರೊಡಕ್ಷನ್ ವಾರೆಂಟ್ ಹೊರಡಿಸಿದ ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, ಆರೋಪಿಯನ್ನು ಫೆ.18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಇಡಿ ಎಲ್ಲ ವ್ಯವಸ್ಥೆಗಳನ್ನು ಮಾಡಲಿದೆ ಎಂದು ಹೇಳಿದರು.
ತನಿಖಾ ಸಂಸ್ಥೆಯು ಆತನನ್ನು ಸಂಬಂಧಿಸಿದ ಅಪರಾಧದಲ್ಲಿ (ಸುಲಿಗೆ ಪ್ರಕರಣಗಳಲ್ಲಿ) ಪುನಃ ಕಳುಹಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಭೂಗತ ಜಗತ್ತಿನ ಕಾರ್ಯಾಚರಣೆಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳ ಬಗ್ಗೆ ತನಿಖೆಯ ಭಾಗವಾಗಿ ಮುಂಬೈನಲ್ಲಿ ಅನೇಕ ಶೋಧಗಳನ್ನು ನಡೆಸಿದ ಒಂದು ದಿನದ ನಂತರ ಕಸ್ಕರ್ ಅವರನ್ನು ಇ ಡಿ ವಿಚಾರಣೆ ನಡೆಸಿದೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಇಬ್ರಾಹಿಂ ಜತೆ ನಂಟು ಹೊಂದಿರುವ 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಇವರಲ್ಲಿ ಇಬ್ರಾಹಿಂ ಅವರ ದಿವಂಗತ ಸಹೋದರಿ ಹಸೀನಾ ಪಾರ್ಕರ್, ಕಸ್ಕರ್ ಮತ್ತು ಮುಂಬೈನಲ್ಲಿ ದರೋಡೆಕೋರ ಛೋಟಾ ಶಕೀಲ್ ಅವರ ಸೋದರ ಮಾವ ಸೇರಿದ್ದಾರೆ.
ಇಬ್ರಾಹಿಂ ಮತ್ತು ಇತರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇತ್ತೀಚೆಗೆ ದಾಖಲಿಸಿದ ಎಫ್ಐಆರ್ ಆಧರಿಸಿ ಇಡಿ ಪ್ರಕರಣವನ್ನು ಧಾಖಲಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್ಗಳ ಅಡಿಯಲ್ಲಿ ಎನ್ಐಎ ತನ್ನ ಕ್ರಿಮಿನಲ್ ದೂರು ದಾಖಲಿಸಿದೆ.








