ಬೆನ್ ಸ್ಟೋಕ್ಸ್ – ಡಾಮಿನಿಕ್ ಸಿಬ್ಲೇಯ್ ಮನ ಮೋಹಕ ಶತಕ- ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್
ಬೆನ್ ಸ್ಟೋಕ್ಸ್ ಮತ್ತು ಡಾಮಿನಿಕ್ ಸಿಬ್ಲೇಯ್ ಅವರ ಮನ ಮೋಹಕ ಶತಕದ ನೆರವಿಂದ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ದಾಖಲಿಸಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಮಿಂಚುಹರಿಸಿದ್ದು ಬೆನ್ ಸ್ಟೋಕ್ಸ್ ಮತ್ತು ಡಾಮಿನಿಕ್ ಸಿಬ್ಲೇಯ್ ಅವರ ದ್ವಿಶತಕದ ಜೊತೆಯಾಟ.
ಪರಿಣಾಮ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 469 ರನ್ ದಾಖಲಿಸಿ ತನ್ನ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ. ಕ್ರೇಗ್ ಬ್ರಾತ್ ವೇಟ್ ಅಜೇಯ 6 ಮತ್ತು ಅಲ್ಝಾರಿ ಜೊಸೇಫ್ 14 ರನ್‍ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜಾನ್ ಕ್ಯಾಂಬೆಲ್ 12 ರನ್ ಗಳಿಸಿ ಸ್ಯಾಮ್ ಕುರನ್ ಅವರಿಗೆ ವಿಕೆಟ್ ಒಪ್ಪಿಸಿದ್ರು.
ಬೆನ್ ಸ್ಟೋಕ್ಸ್ ಮತ್ತು ಡಾಮಿನಿಕ್ ಅವರು ನಾಲ್ಕನೇ ವಿಕೆಟ್‍ಗೆ 260 ರನ್ ದಾಖಲಿಸಿದ್ರು. ಸಿಬ್ಲೇಯ್ 372 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 120 ರನ್ ಗಳಿಸಿದ್ರು. ಇನ್ನೊಂದೆಡೆ ಬೆನ್ ಸ್ಟೋಕ್ಸ್ 356 ಎಸೆತಗಳಲ್ಲಿ 17 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ 176 ರನ್ ಸಿಡಿಸಿದ್ರು.
ಇನ್ನುಳಿದಂತೆ ಇಂಗ್ಲೆಂಡ್ ತಂಡದ ಪರ ಒಲಿವ್ ಪೊಪ್ (7), ಜೋಸ್ ಬಟ್ಲರ್ (40), ಕ್ರೀಸ್ ವೋಕ್ಸ್ (0), ಸ್ಯಾಮ್ ಕುರನ್ (17), ಡಾಮಿನಿಕ್ ಬೆಸ್ (ಅಜೇಯ 31) ಹಾಗೂ ಸ್ಟುವರ್ಟ್ ಬ್ರಾಡ್ (ಅಜೇಯ 11) ರನ್ ದಾಖಲಿಸಿದ್ರು.
ವೆಸ್ಟ್ ಇಂಡೀಸ್ ಪರ ರೊಸ್ಟನ್ ಚೇಸ್ 172 ರನ್ ನೀಡಿ ಐದು ವಿಕೆಟ್ ಪಡೆದ್ರೆ, ಕೇಮರ್ ರಾಚ್ ಎರಡು ವಿಕೆಟ್ ಮತ್ತು ಅಲ್ಝಾರಿ ಜೋಸೆಫ್ ಮತ್ತು ಜೇಸನ್ ಹೋಲ್ಡರ್ ತಲಾ ಒಂದು ವಿಕೆಟ್ ಉರುಳಿಸಿದ್ರು. ಈಗಾಗಲೇ ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ ಅಂತರವನ್ನು ಸಮಗೊಳಿಸುವ ಇರಾದೆಯಲ್ಲಿದ್ರೆ, ವೆಸ್ಟ್ ಇಂಡೀಸ್ ಸರಣಿ ಗೆಲ್ಲುವ ಉಮೇದಿನಲ್ಲಿದೆ.