ಮೈಸೂರು: ಕೊರೊನಾ ಭೀತಿಯ ನಡುವೆಯೂ ನಿನ್ನೆ ನಡೆದ ನಾಡಹಬ್ಬ ದಸರಾ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರು ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳ ಕುಟುಂಬದವರನ್ನು ಮಂಗಳ ವಾದ್ಯಗಳೊಂದಿಗೆ ಕರೆತರಲಾಯಿತು. ಮೊದಲು ದೇವಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನ ಸುತ್ತ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ.
ದಸರಾ ಹೊತ್ತಿನಲ್ಲೇ ಮೈಸೂರಿಗೆ ವರ್ಗಾವಣೆ ಆಗಿ ಬಂದಿದ್ದ ರೋಹಿಣಿ ಸಿಂಧೂರಿ, ದಸರಾ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಹರಕೆ ಹೊತ್ತು 9 ದಿನವೂ ಪಲ್ಲಕ್ಕಿ ರಥ ಎಳೆದು ಹರಕೆ ಪೂರೈಸಿದ್ದಾರೆ.
ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಸಂಜೆ ಬೆಟ್ಟಕ್ಕೆ ತೆರಳಿದ ರೋಹಿಣಿ ನಾಡ ಅಧಿದೇವಿಗೆ ಪೂಜೆ ಸಲ್ಲಿಸಿ ರಥ ಎಳೆದು ಹರಕೆ ತೀರಿಸುವುದು ಗಮನ ಸೆಳೆದಿದೆ.
ಕೊರೊನಾ ಭೀತಿ ನಡುವೆ ನಿನ್ನೆ ನಡೆದ ಸರಳ ಜಂಬೂ ಸವಾರಿ ಯಶಸ್ವಿಯಾಗಿತ್ತು. ಜಂಬೂಸವಾರಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಖ್ಯಮಂತ್ರಿ, ಸಚಿವರು ಸೇರಿದಂತೆ ಕೇವಲ 300 ಮಂದಿಗೆ ಅವಕಾಶ ನೀಡಲಾಗಿತ್ತು.
ಅರಮನೆ ಆವರಣದಲ್ಲೇ ಆರಂಭವಾಗಿ ಅರಮನೆ ಆವರಣದಲ್ಲೇ ಕೇವಲ 40 ನಿಮಿಷದಲ್ಲಿ ಜಂಬೂಸವಾರಿ ಮೆರವಣಿಗೆ ಅಂತ್ಯಗೊಂಡಿತ್ತು. ಜಂಬೂ ಸವಾರಿ ವೇಳೆ ಕೇವಲ ಎರಡು ಸ್ತಬ್ದ ಚಿತ್ರಗಳು ಮಾತ್ರ ಸಾಗಿ ಬಂದಿದ್ದವು. ಯಾವುದೇ ಗೊಂದಲ, ನೂಕುನುಗ್ಗಲು ಇಲ್ಲದೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಚಾಮುಂಡೇಶ್ವರಿಯ ಮೆರವಣಿಗೆ ಅಡ್ಡಿ ಆತಂಕವಿಲ್ಲದೆ ಸಮಾಪ್ತಿಗೊಂಡಿತ್ತು.
ದಸರಾ ಮಹೋತ್ಸವ ಸರಳವಾಗಿ ಮುಕ್ತಾಯಗೊಂಡಿರುವುದರಿಂದ ಮೈಸೂರು ನಾಗರಿಕರ ಮೆಚ್ಚುಗೆಗೂ ಪಾತ್ರವಾಗಿದೆ. ಸಾರ್ವಜನಿಕರು ಕೂಡ ಮನೆಯಿಂದಲೇ ಜಂಬೂಸವಾರಿಯ ಮೆರವಣಿಗೆ ನೋಡಿ ಕಣ್ತುಂಬಿಕೊಳ್ಳುವ ಮೂಲಕ ಕೊರೊನಾ ಸೋಂಕು ಹರಡದಂತೆ ಮೈಸೂರು ಜಿಲ್ಲಾಡಳಿತ ಕೈಗೊಂಡಿದ್ದ ಮುನ್ನೆಚ್ಚರಿಕಾ ಕಾರ್ಯಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel