ಕೋಲಾರ ವಾರ್ ರೂಂ ಬಹಳ ಚೆನ್ನಾಗಿದೆ : ಡಿಸಿಎಂ ಅಶ್ವತ್ಥ್ ನಾರಾಯಣ್
ಕೋಲಾರ: ಕೋಲಾರದಲ್ಲಿ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಜಿಲ್ಲೆಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸಿಬ್ಬಂದಿ , ವೈದ್ಯಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಕೋವಿಡ್ ಸೋಂಕಿತರಾಗಿ ಮನೆಗಳಲ್ಲಿ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರವವರ ಮಾಹಿತಿಯನ್ನು ಸರಿಯಾಗಿ ಸಂಗ್ರಹ ಮಾಡಬೇಕೆಂದು ಸೂಚಿಸಲಾಗಿದೆ.
ಪ್ರತಿ ಮಾಹಿತಿಯನ್ನು ಕೋವಿಡ್ ವಾರ್ ರೂಂಗೆ ಅಪ್ಡೇಟ್ ಮಾಡಬೇಕು. ಪ್ರತಿ ಸೋಂಕಿನ ಮಾಹಿತಿಯನ್ನು ಚಾಚೂ ತಪ್ಪದೇ ಇಟ್ಟಿರಬೇಕು. ಹೋಮ್ ಐಸೋಲೇಷನ್ ಆದವರು ಮಾತ್ರವಲ್ಲ ಉಳಿದೆಲ್ಲ ಸೋಂಕಿತರಿಗೆ ಇರುವ ಸೌಲಭ್ಯ ಮತ್ತಿತರೆ ಎಲ್ಲ ಅಂಶಗಳ ಬಗ್ಗೆಯೂ ಕಾಲ್ ಸೆಂಟರ್ಗೆ ಮಾಹಿತಿ ನೀಡಬೇಕು ಎಂದರು.
ಅಲ್ಲದೇ ಕೋಲಾರ ವಾರ್ ರೂಂ ಬಹಳ ಚೆನ್ನಾಗಿದೆ. ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲೆಯ ಸಮಗ್ರ ಮಾಹಿತಿಯನ್ನೂ ಇಲ್ಲಿಗೆ ಒದಗಿಸಿದರೆ ಸರಕಾರಕ್ಕೆ ಸೌಲಭ್ಯಗಳನ್ನು ಕೊಡುವುದು ಸುಲಭವಾಗುತ್ತದೆ ಎಂದಿದ್ದಾರೆ.