ಬೆಂಗಳೂರು: ಇಡೀ ದೇಶದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದು ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ ಬಗ್ಗೆ ಹಮ್ಮಿಕೊಂಡಿದ್ದ ಐದು ದಿನಗಳ ಆನ್‍ಲೈನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ. ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ.
ಇಡೀ ದೇಶದಲ್ಲೇ ಈ ನೀತಿಯನ್ನು ಮೊಟ್ಟ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಮೊದಲಿನಿಂದಲೂ ಉತ್ಸುಕತೆಯನ್ನು ಹೊಂದಿದ್ದು, ನೀತಿಯ ಕರಡು ಪ್ರತಿ ಕೈಸೇರುತ್ತಿದ್ದಂತೆ, ನೀತಿಯ ಜಾರಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡುವ ಬಗ್ಗೆ ಈಗಾಗಲೇ ಕಾರ್ಯಪಡೆ ಹಲವು ಸಲಹೆಗಳನ್ನು ನೀಡಿದೆ. ಶಿಫಾರಸುಗಳು ಬಂದ ಕೂಡಲೇ ಸರಕಾರ ನೀತಿಯ ಜಾರಿಯತ್ತ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಇಡಲಿದೆ ಎಂದು ತಿಳಿಸಿದ್ದಾರೆ.








