ರಾಜ್ಯದಲ್ಲಿ ಮತ್ತೆ ಸಿಎಂ ಸ್ಥಾನ ಹಸ್ತಾಂತರ ಕುರಿತು ಚರ್ಚೆ ಗರಿಗೆದರಿರುವ ನಡುವಲ್ಲೇ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ಹೈಕಮಾಂಡ್ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ ಎಂಬ ಯತೀಂದ್ರ ಹೇಳಿಕೆ, ಡಿಕೆಶಿಯನ್ನೇ ಗುರಿಯಿಟ್ಟ ಮಾತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು.
ಈ ಕುರಿತು ಪ್ರತಿಕ್ರಿಯಿಸಲು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಅವರತ್ತ ಧಾವಿಸಿದಾಗ, ಅವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ನೀಡಲಿ ಎಂದು ಹೇಳಿ, ಚರ್ಚೆಗೆ ತೆರೆ ಹಾಕುವ ಬದಲಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದರು.
ಅವರ ಈ ಮಾರ್ಮಿಕ ಉತ್ತರ ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ ಒಳಜಗಳ ಮತ್ತೊಮ್ಮೆ ಮೇಲ್ಮೈಗೆ ಬಂದಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೈಕಮಾಂಡ್ ಯಾವಾಗ, ಹೇಗೆ ಮಧ್ಯಪ್ರವೇಶ ಮಾಡುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ಅವಲಂಬಿತವಾಗಿದೆ.








