ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರಿಸುತ್ತಾ ಸಾಗಿದೆ. ಸಿಕ್ಕ ಸಿಕ್ಕವರ ದೇಹಹೊಕ್ಕುತ್ತಿರುವ ಹೆಮ್ಮಾರಿ ರಾಜ್ಯದಾದ್ಯಂತ ತನ್ನ ಕಬಂದ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋದು ಜನರ, ಸರ್ಕಾರದ ನಿದ್ದೆಗೆಡಿಸಿದೆ.
ಈ ಹಿನ್ನೆಲೆ ಸೋಂಕು ನಿಯಂತ್ರಣಕ್ಕೆ ಸರ್ಕಾರ ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಜಾರಿ ಮಾಡಿದೆ. ಅದರಂತೆ ಕಳೆದ ಭಾನುವಾರ ರಾಜ್ಯ ಸ್ಥಬ್ದವಾಗಿತ್ತು. ನಾಳೆಯೂ ಕರುನಾಡು ಲಾಕ್ ಆಗಲಿದೆ. ಇದರ ಮಧ್ಯೆ ಭಾನುವಾರದ ಜೊತೆಗೆ ಶನಿವಾರವೂ ಕೂಡ ಲಾಕ್ ಡೌನ್ ಆಗಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಈ ಬಗ್ಗೆ ಇದೀಗ ಡಿಸಿಎಂ ಅಶ್ವಥ್ ನಾರಾಯಣ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಕೇಸ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶನಿವಾರ ಕೂಡ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಲಾಕ್ ಡೌನ್ ಅವಶ್ಯಕತೆ ಜನರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಆದರೆ ಲಾಕ್ ಡೌನ್ ನಿಂದ ವೈರಸ್ ಹರಡುವುದನ್ನು ಮುಂದೂಡಬಹುದೇ ಹೊರತು ತಡೆಯಲು ಸಾಧ್ಯವಿಲ್ಲ. ಲಾಕ್ ಡೌನ್ ಬಗ್ಗೆ ಇಲ್ಲಿಯ ತನಕ ನಮಗೆ ಒಲವು ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಮಾತನಾಡಿದ ಡಿಸಿಎಂ, ಪಿಪಿಇ ಕಿಟ್ ಬೆಲೆ ಮಾರ್ಕೆಟ್ ನಲ್ಲಿ ಹೆಚ್ಚು ಇತ್ತು. ದಿನ ಕಳೆದಂತೆ ಅದರ ಬೆಲೆ ಕಡಿಮೆ ಆಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಈ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲುವುದು ಬಿಟ್ಟು ಇಂತಹ ಆರೋಪ ಮಾಡಬಾರದು. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಆರೋಪ ಮಾಡುವ ಮೂಲಕ ರಾಜಕೀಯ ಮಾಡಬಾರದು. ಜನರ ತೆರಿಗೆ ಹಣ ಯಾವುದೇ ಕಾರಣಕ್ಕೂ ಪೋಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.








