ಮಳೆ, ನೆರೆ ನಿರ್ವಹಿಸಲು ಸರ್ಕಾರ ವಿಫಲ ಎಂಬ ಕಾಂಗ್ರೆಸ್ ಆರೋಪ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಅವರು ಪ್ರತಿಕ್ರಿಯೆ ನೀಡಿದ್ದು, “ಪ್ರಕೃತಿ ವಿಕೋಪ ಹೇಳಿ ಕೇಳಿ ಬರಲ್ಲ” ಎಂದು ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮಳೆ ಆರಂಭವಾಗಿದೆ, ಸರ್ಕಾರ ನೆರೆ ಸ್ಥಿತಿ ಎದುರಿಸಲು ಸಜ್ಜಾಗಿದೆ. ಈ ಹಂತದಲ್ಲಿ ಸರ್ಕಾರ ವಿಫಲವಾಗಿದೆ ಅಂದ್ರೆ ಕಾಂಗ್ರೆಸ್ ಮನಸ್ಥಿತಿ ಎಂಥದ್ದು ಅಂತ ಅರ್ಥವಾಗ್ತಿಲ್ಲ. ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಕಾಂಗ್ರೆಸ್ ನಾಯಕರು, ಜನರಲ್ಲಿ ವಿಶ್ವಾಸ ಮೂಡಿಸಿ ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕು.ಜನರ ಕಷ್ಟಕ್ಕೆ ಸ್ಪಂದಿಸಬೇಕು. ಚರ್ಚೆ ಮಾಡಬೇಕಂದ್ರೆ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ಕೈ ನಾಯಕರ ವಿರುದ್ಧ ಡಿಸಿಎಂ ಗುಡುಗಿದರು.
ಇನ್ನು ಪ್ರವಾಹ ಭೀತಿ ಇರೋ ಕಡೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗ್ತಿದೆ. ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದ್ದು, ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಸಹಕಾರ ಸಿಗುತ್ತಿದ್ದು, ಪ್ರಕೃತಿ ವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತೆ. ಕೇಂದ್ರ ಪ್ರಕೃತಿ ವಿಕೋಪ ಆದಾಗಲೆಲ್ಲ ನೆರವು ಕೊಟ್ಟಿದೆ ಎಂದು ಹೇಳಿದರು.








