ಹೊಸದಿಲ್ಲಿ, ಜೂನ್ 9: ಕೊರೋನಾ ಸೋಂಕು ರಾಷ್ಟ್ರ ರಾಜಧಾನಿಯಲ್ಲಿ ಸಮುದಾಯ ಪ್ರಸರಣ ಹಂತಕ್ಕೆ ಪ್ರವೇಶಿಸಿದೆಯೇ ಎಂದು ಕಂಡುಹಿಡಿಯಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಮಹತ್ವದ ಸಭೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ತಿಳಿಸಿದ್ದಾರೆ. ಸಭೆಯ ಫಲಿತಾಂಶದ ಆಧಾರದ ಮೇಲೆ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಎಪಿ ಸರ್ಕಾರವು ತನ್ನ ಕಾರ್ಯತಂತ್ರವನ್ನು ರೂಪಿಸಲಿದೆ ಎಂದು ಅವರು ಹೇಳಿದ್ದಾರೆ.
ಶೀತ, ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವ ಡಿಡಿಎಂಎ ಉಪಾಧ್ಯಕ್ಷರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪರವಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಅಧಿಕಾರ ನೀಡಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಐಸೋಲೇಶನ್ ಗೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಇಂದು ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪಶ್ಚಿಮ ಬಂಗಾಳದ ಲಾಕ್‌ಡೌನ್ ಅನ್ನು ಜೂನ್ 30 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದರೆ, ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ಥಂಗಾ ಸೋಮವಾರ ಮಧ್ಯರಾತ್ರಿಯಿಂದ ಎರಡು ವಾರಗಳವರೆಗೆ ತಮ್ಮ ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಮುಂದುವರಿಸಿದ್ದಾರೆ. ಇದಲ್ಲದೆ, ಇಂದಿನಿಂದ ಕ್ಯಾರೆಂಟೈನ್ ಅವಧಿ ಈಶಾನ್ಯ ರಾಜ್ಯದಲ್ಲಿ 21 ದಿನಗಳು ಮತ್ತು ಹೋಂ ಕ್ವಾರಂಟೈನ್ ಆಯ್ಕೆ ಅತ್ಯಂತ ಅನಿವಾರ್ಯ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತವು ಸತತ ಐದನೇ ದಿನಕ್ಕೆ 9,000 ಕ್ಕಿಂತ ಹೆಚ್ಚು ಜಿಗಿತವನ್ನು ದಾಖಲಿಸಿದ್ದು, ಒಟ್ಟು ಸೋಂಕುಗಳ ಸಂಖ್ಯೆಯನ್ನು 2,56,611 ಕ್ಕೆ ತಲುಪಿದೆ. 2.56 ಲಕ್ಷ ಪ್ರಕರಣಗಳಲ್ಲಿ 1,25,381 ಸಕ್ರಿಯ ಪ್ರಕರಣಗಳಾದರೆ, 1,24,094 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಸಾವಿನ ಸಂಖ್ಯೆ 7,000 ದಾಟಿದ್ದು 7135 ಕ್ಕೆ ಬಂದು ತಲುಪಿದೆ. ದೇಶದ ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಈಗ ಚೀನಾಕ್ಕಿಂತ ಹೆಚ್ಚಿನ ಪ್ರಕರಣಗಳಿವೆ. ಚೀನಾದ 84,191 ಪ್ರಕರಣಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ 85,975 ಪ್ರಕರಣಗಳಿವೆ. ಜಾಗತಿಕವಾಗಿ, 4 ಲಕ್ಷ ಸಾವುಗಳೊಂದಿಗೆ 7 ಮಿಲಿಯನ್ ಪ್ರಕರಣಗಳಿವೆ.








