ಅನ್ಲಾಕ್-3 : ದೆಹಲಿಯಲ್ಲಿ ಹೋಟೆಲ್, ಮಾರುಕಟ್ಟೆಗಳನ್ನು ತೆರೆಯಲು ಡಿಡಿಎಂಎ ಅನುಮೋದನೆ
ಹೊಸದಿಲ್ಲಿ, ಅಗಸ್ಟ್ 19: ದೆಹಲಿಯಲ್ಲಿ ಹೋಟೆಲ್ಗಳು, ಮಾರುಕಟ್ಟೆಗಳು ಮತ್ತೆ ಪುನರಾರಂಭಗೊಳ್ಳಲಿವೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ರಾಷ್ಟ್ರ ರಾಜಧಾನಿಯಲ್ಲಿ ಹೋಟೆಲ್ಗಳನ್ನು ಮತ್ತೆ ತೆರೆಯಲು ಬುಧವಾರ ಅನುಮೋದನೆ ನೀಡಿದೆ. ದೆಹಲಿಯ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್ಗಳು ಮತ್ತು ಮಾರುಕಟ್ಟೆಗಳನ್ನು ಪುನಃ ತೆರೆಯುವ ಬಗ್ಗೆ ಡಿಡಿಎಂಎ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ದೇಶದಲ್ಲಿ ಅನ್ಲಾಕ್ 3.0 ಪ್ರಾರಂಭವಾದಾಗಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಹೋಟೆಲ್, ಜಿಮ್ ಮತ್ತು ಮಾರುಕಟ್ಟೆಗಳನ್ನು ಪುನಃ ತೆರೆಯುವಂತೆ ಪ್ರತಿಪಾದಿಸುತ್ತಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿನ ಕುಸಿತವನ್ನು ಉಲ್ಲೇಖಿಸಿ ಈ ತಿಂಗಳ ಆರಂಭದಲ್ಲಿ ಎಸ್ಡಿಎಂಎ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಎರಡು ಬಾರಿ ಪ್ರಸ್ತಾವನೆಯನ್ನು ಕಳುಹಿಸಿತ್ತು.
ಆದಾಗ್ಯೂ, ಸ್ಥಳೀಯ ಮಾರುಕಟ್ಟೆಗಳು ಮತ್ತು ಜಿಮ್ ಗಳಿಂದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಪುನಃ ಏರಿಕೆಯಾಗಬಹುದೆಂದು ಕಾರಣ ನೀಡಿ ಈ ಮೊದಲು ಸರ್ಕಾರದ ಪ್ರಸ್ತಾವನೆಯನ್ನು ಎಲ್ಜಿ ಕಚೇರಿ ತಿರಸ್ಕರಿಸಿತ್ತು.

ಏತನ್ಮಧ್ಯೆ, ದೆಹಲಿಯ ಕೊರೋನವೈರಸ್ ಸಂಖ್ಯೆ ಬುಧವಾರ 1.54 ಲಕ್ಷವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿದಲ್ಲಿ 1,374 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಇಲ್ಲಿಯವರೆಗೆ 4,200 ದಾಟಿದೆ. ಕಳೆದ 24 ಗಂಟೆಗಳಲ್ಲಿ 12 ಹೊಸ ಸಾವಿನ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ನಿನ್ನೆ ಹೇಳಿದೆ.








