ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇಂದು ಪ್ರಚಾರದ ಅಬ್ಬರ ಜೋರಾಗಲಿದ್ದು, ತಾರಾ ಮೆರೆಗು ಪಡೆಯಲಿದೆ.
ಅದರಲ್ಲೂ ಶಿರಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಮೂರು ಪಕ್ಷಗಳ ಘಟಾನುಘಟಿಗಳು ಧೂಳೆಬ್ಬಿಸಲಿದ್ದಾರೆ.
ಇತ್ತ ಆರ್.ಆರ್ ನಗರದಲ್ಲಿ ಕುರುಕ್ಷೇತ್ರ ಚಿತ್ರದ ನಿರ್ಮಾಪಕರೂ ಆಗಿರುವ ಮುನಿರತ್ನ ಪರ ಡಿಬಾಸ್ ಖ್ಯಾತಿಯ ನಟ ದರ್ಶನ್ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ನಟಿಸಿದ್ದ ದರ್ಶನ್ ನಟಿಸಿದ್ದರು. ಹೀಗಾಗಿ ಇಬ್ಬರೂ ಆತ್ಮೀಯರಾಗಿದ್ದು, ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ಕ್ಯಾಂಪೇನ್ ಮಾಡುತ್ತಿದ್ದಾರೆ.
ಕಳೆದ ವರ್ಷ ಮಂಡ್ಯದ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದ ನಟ ದರ್ಶನ್, ಪ್ರಚಾರ ಕಣದಲ್ಲಿ ಭಾರಿ ಹವಾ ಎಬ್ಬಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಹಾಗೂ ದರ್ಶನ್‍ರ ಜೋಡಿ ಪ್ರಚಾರ ಮಂಡ್ಯ ಚುನಾವಣಾ ಕಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೆಲುವಿಗಾಗಿ ನಡೆಸಿದ ಕಸರತ್ತು ವಿಫಲವಾಗಿತ್ತು. ಯಶ್ ಹಾಗೂ ದರ್ಶನ್‍ರನ್ನು ಜೋಡೆತ್ತು, ಕಳ್ಳೆತ್ತು ಎಂದು ಕುಮಾರಸ್ವಾಮಿ ಟೀಕಿಸಿದ್ದನ್ನೇ ಅಸ್ತ್ರವಾಗಿ ಬಳಸಿಕೊಂಡು ತಮ್ಮ `ಮದರ್ ಇಂಡಿಯಾ’ಗೆ ಗೆಲುವಿಗೆ ಶ್ರಮಿಸಿದ್ದರು.
ಆರ್.ಆರ್ ನಗರ ಕ್ಷೇತ್ರದಲ್ಲಿ ಮಂಡ್ಯದಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಒಂದು ಸುತ್ತಿನ ಪ್ರಚಾರ ನಡೆಸಿ ತೆರಳಿರುವ ಬೆನ್ನಲ್ಲೇ ಡಿಬಾಸ್ ದರ್ಶನ್ ಎಂಟ್ರಿ ಕೊಡುತ್ತಿದ್ದಾರೆ.
ಜತೆಗೆ ಮುನಿರತ್ನ ಪರ ನಟಿ ತಾರಾ, ಸಚಿವ ಡಾ.ಕೆ ಸುಧಾಕರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಲಿದ್ದಾರೆ.
ಶಿರಾಕ್ಕೆ ಮೂರು ಪಕ್ಷಗಳ ಘಟಾನುಘಟಿಗಳ ಎಂಟ್ರಿ
ಆರ್‍ಆರ್ ನಗರದಂತೆಯೇ ಶಿರಾದಲ್ಲಿ ಕೂಡ ಪ್ರಚಾರದ ಅಬ್ಬರ ಜೋರಾಗಿದೆ. ಇಂದು ಮೂರು ಪಕ್ಷಗಳ ಘಟಾನುಘಟಿಗಳು ಶಿರಾ ಕ್ಷೇತ್ರದಲ್ಲಿ ದೂಳೆಬ್ಬಿಸಲಿದ್ದಾರೆ.
ಮಾಜಿ ಸಚಿವ ಟಿ.ಬಿ ಜಯಚಂದ್ರ ಪರ ಹುಲಿಯಾ ಖ್ಯಾತಿಯ ಮಾಜಿ ಸಿಎಂ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮೊದಲು ಸುದ್ದಿಗೋಷ್ಠಿ ನಡೆಸಿ ನಂತರ ಕಳ್ಳಂಬೆಳ್ಳ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪರ ಮತಬೇಟೆ ನಡೆಸಲಿದ್ದಾರೆ.
ಜೆಡಿಎಸ್‍ನ ದಳಪತಿಗಳೂ ಕೂಡ ಇಂದು ಅಮ್ಮಾಜಮ್ಮ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಕಳ್ಳಂಬೆಳ್ಳ ಸೇರಿದಂತೆ 15 ಗ್ರಾಮಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೂಡ ಜೆಡಿಎಸ್ ಅಭ್ಯರ್ಥಿ ಪರ ಮತಬೇಟೆ ನಡೆಸಲಿದ್ದಾರೆ.
ಕಮಲ ಪಕ್ಷ ಬಿಜೆಪಿಯಿಂದಲೂ ಶಿರಾ ಕ್ಷೇತ್ರದಲ್ಲಿ ಇಂದು ಅಬ್ಬರದ ಪ್ರಚಾರ ನಡೆಯಲಿದೆ. ನಿನ್ನೆಯಿಂದ ಶಿರಾದಲ್ಲೇ ಠಿಕಾಣಿ ಹೂಡಿರುವ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇಂದೂ ಪ್ರಚಾರ ಮುಂದುವರೆಸಲಿದ್ದಾರೆ. ಕಟೀಲ್ ಅಲ್ಲದೆ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel