ಮಡಿಕೇರಿ : ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಬ್ರಹ್ಮಗಿರಿ ಗುಡ್ಡ ಕುಸಿತ ಪರಿಣಾಮ ಕೊಡಗಿನ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ನಾಪತ್ತೆಯಾಗಿದ್ದರು. ಈ ಐವರಲ್ಲಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದ ತೀರ್ಥ ಸ್ವಾಮಿಯವರ ಮೃತ ದೇಹ ರಕ್ಷಣಾ ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿರುವುದಾಗಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಸಹೋದರನ ಮೃತ ದೇಹ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಭಾಗಮಂಡಲದಲ್ಲಿ ನಡೆಯಲಿದ್ದು, ಶೋಧನಾ ಕಾರ್ಯ ಮುಂದುವರಿದಿದೆ ಎಂಬುದಾಗಿ ತಿಳಿಸಿದ್ದಾರೆ.
ಸದ್ಯ ಇನ್ನುಳಿದ ಅರ್ಚಕರ ಪತ್ನಿ ಶಾಂತ, ಅರ್ಚಕ ನಾರಾಯಣಾಚಾರ್ ಮತ್ತು ಮಂಗಳೂರು ಮೂಲದ ಇಬ್ಬರು ಸಹಾಯಕ ಅರ್ಚಕರ ಪತ್ತೆಗೆ ಶೋಧ ಕಾರ್ಯ ಮುಂದುವರಿದೆ.
ಕಳೆದ ಮೂರು ದಿನಗಳಿಂದಲೂ ಬ್ರಹ್ಮಗಿರಿಯಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಆದರೆ ಎಡೆಬಿಡದೇ ಸುರಿಯುತ್ತಿದ್ದ ಮಳೆ ಹಾಗೂ ಕೆಸರಿನಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇಂದು ಎನ್‌ಡಿಆರ್ ಎಫ್ ನ ನಿರಂತರ ಕಾರ್ಯಾಚರಣೆಯಲ್ಲಿ ಒಬ್ಬರ ಮೃತದೇಹ ಮಾತ್ರ ಪತ್ತೆಯಾಗಿದೆ.








