ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರು ಕೊಲೆಯಾಗಿದ್ದಾರೆ. ಇಬ್ಬರು ಸ್ನೇಹಿತರು ಪರಸ್ಪರ ಬಡಿದಾಡಿಕೊಂಡ ಪರಿಣಾಮ ಒಬ್ಬ ಯುವಕ ಸಾವನ್ನಪ್ಪಿರುವ ಘಟನೆ ಹಾಸನದ ರಿಂಗ್ ರಸ್ತೆ ಬಳಿ ನಡೆದಿದೆ.
ಪುನೀತ್(27) ಎಂಬ ಯುವಕನನ್ನು ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ವಾಪಸ್ ಬರುವ ಹಾಸನದ ರಿಂಗ್ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.
ರಿಂಗ್ ರಸ್ತೆಯ ಉಲ್ಲಾಸ್ ಬಾರ್ ಬಳಿ ಪುನೀತ್‍ನನ್ನು ಅಡ್ಡಗಟ್ಟಿದ ಸ್ನೇಹಿತ ಚಂದನ್, ಹೆಲ್ಮೆಟ್ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಪುನೀತ್ ಕೂಡ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕಾರಣ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಪುನೀತ್‍ನನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರೂ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾನೆ. ಹಾಸನ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಚಂದನ್‍ನನ್ನೂ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಶೂಟ್ ಮಾಡಿ ಯುವಕನ ಕೊಲೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಡಬಲ್ ಬ್ಯಾರಲ್ ಗನ್‍ನಿಂದ ಯುವಕನೊಬ್ಬನನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೊಪ್ಪಿನಹಳ್ಳಿ ಗ್ರಾಮದ 28 ವರ್ಷದ ಯುವಕ ಮಧು ಎಂಬಾನನ್ನು ರೂಪೇಶ್ ಎಂಬಾತ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಸೊಪ್ಪಿನಹಳ್ಳಿ ಗ್ರಾಮದ ಯುವತಿಯನ್ನು ಮಧು ಪ್ರೀತಿ ಮಾಡುತ್ತಿದ್ದ. ಆಕೆಯನ್ನು ಮದುವೆಯಾಗಲು ಕಿಡ್ನಾಪ್ ಮಾಡಿದ್ದ. ಈ ಪ್ರಕರಣದಲ್ಲಿ ಮಧು ಜೈಲು ಸೇರಿ ಬಳಿಕ ಬಿಡುಗಡೆಯಾಗಿದ್ದ.
ತನ್ನನ್ನು ಜೈಲಿಗೆ ಕಳಿಸಿದ ಯಾರನ್ನೂ ಬಿಡುವುದಿಲ್ಲ ಎಂದು ಮಧು ಹೇಳುತ್ತಿದ್ದ ವಿಚಾರ ತಿಳಿದಿದ್ದ ರೂಪೇಶ್ ಕೋಪದಿಂದ ಕುದಿಯುತ್ತಿದ್ದ. ಬೈರಾಪುರ ಸಮೀಪದ ಸೊಪ್ಪಿನಹಳ್ಳಿ ರಸ್ತೆಯಲ್ಲಿ ಮಧು ತೆರಳುತ್ತಿದ್ದ ವೇಳೆ ಡಬಲ್ ಬ್ಯಾರಲ್ ಗನ್‍ನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ರೂಪೇಶ್‍ಗಾಗಿ ಬಲೆ ಬೀಸಿದ್ದಾರೆ.