ಬೆಂಗಳೂರು: ರಾಜ್ಯದ ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಕರೆಯಲಾಗಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ವ್ಯಕ್ತಿಯೊಬ್ಬರ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ನಡೆದಿದೆ. ಪ್ರಧಾನಿ ಹಾಗೂ ಗೃಹ ಮಂತ್ರಿಗೇ ಹೆದರದೆ ಜೈಲಿಗೆ ಹೋಗಿ ಬಂದವನು ನಾನು, ನನಗೆ ಬೆದರಿಕೆ ಹಾಕಲು ಬರಬೇಡಿ ಎಂದು ಡಿಸಿಎಂ ಬಹಿರಂಗವಾಗಿಯೇ ಗುಡುಗಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಿನ್ನೆ ಬೆಳಿಗ್ಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವತಿಯಿಂದ ಆಯೋಜಿಸಲಾಗಿದ್ದ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ.
ಕಿರಣ್ ಹೆಬ್ಬಾರ್ ಪತ್ರಕ್ಕೆ ಡಿಸಿಎಂ ಕೆಂಗೆಣ್ಣು
ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯ ಕಿರಣ್ ಹೆಬ್ಬಾರ್ ಎಂಬುವವರು ಡಿಸಿಎಂ ಅವರಿಗೆ ಪತ್ರವೊಂದನ್ನು ಬರೆದು ಪ್ರಶ್ನಿಸಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಎಚ್ಚರಿಕೆ ಧಾಟಿಯಲ್ಲಿ ಬರೆದಿದ್ದ ಈ ಪತ್ರ ಡಿ.ಕೆ. ಶಿವಕುಮಾರ್ ಅವರ ಕೋಪಕ್ಕೆ ಕಾರಣವಾಯಿತು. ಸಭೆಯಲ್ಲೇ ಆ ವ್ಯಕ್ತಿಯ ವಿರುದ್ಧ ಹರಿಹಾಯ್ದ ಡಿಸಿಎಂ, ನನ್ನ ಬಳಿ ವ್ಯವಹರಿಸುವಾಗ ಕನಿಷ್ಠ ಸಾಮಾನ್ಯ ಜ್ಞಾನ (Common Sense) ಇಟ್ಟುಕೊಂಡು ಮಾತನಾಡಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ದೆಹಲಿ ನಾಯಕರಿಗೇ ಹೆದರದವನು ನಾನು
ಕಿರಣ್ ಹೆಬ್ಬಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ನನ್ನನ್ನು ಹೆದರಿಸಲು ಬರಬೇಡಿ, ನಾನು ಯಾರಿಗೂ ಹೆದರುವವನಲ್ಲ. ಬಹುಶಃ ಕೆಲವರಿಗೆ ನಾನು ಯಾರು ಎನ್ನುವುದೇ ತಿಳಿದಿಲ್ಲ. ಸಾಕ್ಷಾತ್ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಗೃಹ ಸಚಿವರಿಗೇ ಹೆದರದೆ, ಜೈಲಿಗೆ ಹೋಗಿ ಬಂದವನು ನಾನು. ಇನ್ನು ಈ ಹೆಬ್ಬಾರ್‌ಗೆ ನಾನು ಹೆದರುತ್ತೇನಾ? ನಿಮ್ಮ ವಾರ್ನಿಂಗ್‌ಗಳಿಗೆಲ್ಲಾ ಬಗ್ಗುವ ಜಾಯಮಾನ ನಮ್ಮದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಕೆಲಸ ಮಾಡಿಸಿಕೊಳ್ಳಿ, ರಾಜಕೀಯ ಬೇಡ
ನಿಮ್ಮ ಸೇವೆ ಮಾಡಿದರೆ ನಾಲ್ಕು ಓಟು ಬರುತ್ತದೆ ಎಂಬ ಕಾರಣಕ್ಕೆ ನಾವಿಲ್ಲಿ ಕೆಲಸ ಮಾಡುತ್ತಿದ್ದೇವೆ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದ ಡಿಕೆಶಿ, ಈ ಸರ್ಕಾರವನ್ನು ಹೆದರಿಸಲು ಬರಬೇಡಿ. ನಿಮ್ಮ ಸಮಸ್ಯೆಗಳೇನಿದ್ದರೂ ಹೇಳಿಕೊಳ್ಳಿ, ಕೆಲಸ ಮಾಡಿಸಿಕೊಳ್ಳಿ. ಆದರೆ ಸರ್ಕಾರಕ್ಕೆ ವಾರ್ನ್ ಮಾಡುವುದು, ಬೆದರಿಕೆ ಹಾಕುವುದು ನನ್ನ ಬಳಿ ನಡೆಯಲ್ಲ ಎಂದು ಕಡಕ್ ಆಗಿ ಹೇಳಿದರು.
ಬೆಂಗಳೂರಿನಲ್ಲಿ ಬಿಜೆಪಿಗೆ ಹೆಚ್ಚು ವೋಟ್ ಬಂದಿದೆ ಅಂತ ಗೊತ್ತು
ಬೆಂಗಳೂರಿನಲ್ಲಿ ಬಿಜೆಪಿಗೆ ತಾನೇ ಹೆಚ್ಚು ವೋಟು ಹೋಗಿರೋದು? ಆ ಭ್ರಮೆ ಬೇಡ. ಬಿಜೆಪಿಗೆ ವೋಟ್ ಹಾಕಿದ್ದೇವೆ ಎಂದು ಬೆದರಿಕೆ ಹಾಕಿದರೆ ನಮ್ಮ ಸರ್ಕಾರದ ವಿರುದ್ಧ ನಡೆಯುವುದಿಲ್ಲ. ನಾನು ನೇರವಾಗಿ, ದಿಟ್ಟವಾಗಿ ಮಾತನಾಡುವವನು. ನನ್ನ ಮಾತು ಕಟುವಾಗಿ ಕಂಡರೂ ನಾನು ಮನಸ್ಪೂರ್ತಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮನ್ನು ಕರೆಯಲೇಬೇಕು ಎನ್ನುವ ಯಾವ ನಿಯಮವೂ ಇರಲಿಲ್ಲ. ಆದರೂ ನಿಮ್ಮ ಮೇಲಿನ ವಿಶ್ವಾಸದಿಂದ ನಾನೇ ಕರೆದು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಗ್ಯಾರಂಟಿ ನಿಮಗೆ ತಲುಪಿಲ್ಲವೇ?
ಯಾರೋ ಕಿರಣ್ ಹೆಬ್ಬಾರ್ ಅಂತೆ, ಆತ ನನಗೇ ಎಚ್ಚರಿಕೆ ಕೊಡುತ್ತಾನೆ ಎಂದು ಗರಂ ಆದ ಡಿಕೆಶಿ, ನನಗೆ ಎಚ್ಚರಿಕೆ ಕೊಡುವ ಮುನ್ನ ಹುಷಾರಾಗಿರಿ ಎಂದರು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮಗೆ ತಲುಪಿಲ್ಲವೇ? ಬಿಜೆಪಿ ಆಡಳಿತವಿರುವ ರಾಜ್ಯಗಳೇ ನಮ್ಮ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಇದನ್ನೆಲ್ಲಾ ಮೊದಲು ತಿಳಿದುಕೊಳ್ಳಿ. ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸದಿದ್ದರೆ ಏನು ಮಾಡುತ್ತೀರಾ? ಸುಮ್ಮನೆ ನಮ್ಮನ್ನೇ ದೂಷಣೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.








