ಲಖನೌ: ಕೈ ಮೇಲೆ ಡೆತ್ ನೋಟ್ ಬರೆದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನರ ಉತ್ತರ ಪ್ರದೇಶದ ಔರೇಯಾ ಜಿಲ್ಲೆಯ ಮುರಾದ್ ಗಂಜ್ ನಲ್ಲಿ ನಡೆದಿದೆ. 19 ವರ್ಷದ ವಿಕಾಸ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದು, ಈತ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದನು. ಇಬ್ಬರು ಯುವಕರ ಕಿರುಕುಳದಿಂದ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿ ವಿಕಾಸ್ ಸ್ನೇಹಿತನ ಮದುವೆ ಮುಗಿಸಿಕೊಂಡು ಮನೆಗೆ ಬಂದು ರೂಮಿನಲ್ಲಿ ಮಲಗಿದ್ದನು. ಗುರುವಾರ ಬೆಳಗ್ಗೆ ಪೋಷಕರು ಆತನ ರೂಮಿಗೆ ಹೋಗಿದ್ದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇನ್ನು ವಿಕಾಸ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಕೈ ಮೇಲೆ ಡೆತ್‌ನೋಟ್ ಬರೆದುಕೊಂಡಿದ್ದಾನೆ. ಅದರ ಜೊತೆಗೆ ಆತನ ರೂಮಿನಲ್ಲಿ ಮತ್ತೊಂದು ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಸದ್ಯ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡೆತ್‌ನೋಟ್‌ನಲ್ಲಿ “ಅಪ್ಪ, ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವೃದ್ಧಾಪ್ಯದಲ್ಲಿ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ. ಆದರೆ ಇಬ್ಬರು ಯುವಕರಾದ ಶಿವ ಹಾಗೂ ಸತ್ಯಂ ಅವರನ್ನು ಸುಮ್ಮನೆ ಬಿಡಬೇಡಿ. ಅವರಿಬ್ಬರು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ” ಎಂದು ವಿಕಾಸ್ ಬರೆದಿದ್ದಾನೆ.