ನವದೆಹಲಿ : ಅಪಾರ ಚಿನ್ನ ಧರಿಸಿಕೊಂಡು ಗೋಲ್ಡನ್ ಬಾಬಾ ಎಂದೇ ಕರೆಸಿಕೊಳ್ಳುತ್ತಿದ್ದ ಪೂರ್ವ ದೆಹಲಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದ ಸುಧೀರ್ ಕುಮಾರ್ ಮಕ್ಕರ್ ಬಾಬಾ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಬಾ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಐಷಾರಾಮಿ ಜೀವನದ ಮೇಲೆ ಮೋಹ ಇದ್ದ ಈ ಗೋಲ್ಡನ್ ಬಾಬಾ, 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಮತ್ತು ಬಿಎಂಡಬ್ಲ್ಯು, ಫಾರ್ಚೂನರ್ ಮತ್ತು ಆಡಿ ಕಾರುಗಳನ್ನು ಇಟ್ಟುಕೊಂಡಿದ್ದರು. ಹಾಗೇ ಉಂಗುರು, ಕುತ್ತಿಗೆಗೆ ಅನೇಕ ಸರ, ವಾಚ್, ಬಾಬಾ ಚಿನ್ನದ ಜಾಕೆಟ್ ಕೂಡ ಧರಿಸಿದ್ದರು. ಈ ಬಾಬಾ ವಿರುದ್ಧ ಅಪಹರಣ, ಬೆದರಿಕೆ, ಸುಲಿಗೆ, ಕೊಲೆ ಮುಂತಾದ ಹಲವಾರು ಪ್ರಕರಣಗಳು ದಾಖಲಾಗಿವೆ.
ಗೋಲ್ಡನ್ ಬಾಬಾ ಮೂಲತಃ ಘಾಜಿಯಾಬಾದ್ ನವರಾಗಿದ್ದು, ಸನ್ಯಾಸತ್ವ ಸ್ವೀಕರಿಸುವ ಮೊದಲು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಸನ್ಯಾಸಿಯಾದ ಮೇಲೆ ಗಾಂಧಿ ನಗರದದಲ್ಲಿ ಬಾಬಾ ಆಶ್ರಮ ನಿರ್ಮಿಸಿದ್ದರು. ಬಾಬಾ ಕನ್ವರ್ ಯಾತ್ರೆಗೆ ಪ್ರಯಾಣಿಸುವಾಗಲೆಲ್ಲಾ ಅಪಾರ ಚಿನ್ನ ಧರಿಸಿಕೊಂಡು ಹೊರಗೆ ಹೋಗುತ್ತಿದ್ದರು. ಈ ವೇಳೆ ಸುಮಾರು 30 ಮಂದಿ ಅಂಗರಕ್ಷಕರು ಇವರ ಜೊತೆಗಿರುತ್ತಿದ್ದರು.







