ಮದುಮಗ ಕೊರೊನಾಗೆ ಬಲಿ -ಮದುವೆಯಲ್ಲಿ ಪಾಲ್ಗೊಂಡವರಿಗೆ ಕೊರೊನಾ ಆತಂಕ
ಕಾರವಾರ, ಜುಲೈ 2: ಜೂನ್ 25ರಂದು ಭಟ್ಕಳದಲ್ಲಿ ಮದುವೆಯಾಗಿದ್ದ 25 ವರ್ಷದ ಯುವಕ ಕೋವಿಡ್-19 ನಿಂದಾಗಿ ಮಂಗಳೂರಿನಲ್ಲಿ ಮೃತಪಟ್ಟಿದ್ದು, ಇದೀಗ ಮದುವೆಯಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಸೋಂಕಿನ ಆತಂಕ ಉಂಟಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದ 25 ವರ್ಷದ ಯುವಕ ಜೂನ್ 22 ರಂದು ತನ್ನ ಮದುವೆಯ ಹಿನ್ನಲೆಯಲ್ಲಿ ಭಟ್ಕಳದಲ್ಲಿರುವ ಮೂಲ ಕುಟುಂಬದ ಮನೆಗೆ ಬಂದಿದ್ದು, ಮದುವೆ ಕಾರ್ಯ ಮುಗಿಸಿ ಮಂಗಳೂರಿಗೆ ತೆರಳಿದ್ದರು. ಯುವಕನ ಪಾಲಕರು ಮಂಗಳೂರಿನಲ್ಲಿ ನೆಲೆಸಿದ್ದ ಹಿನ್ನಲೆಯಲ್ಲಿ ಜೂನ್ 25ರಂದು ಮದುವೆ ಕಾರ್ಯ ಮುಗಿಸಿ ಜೂನ್ 26ರಂದು ಅವರೆಲ್ಲರೂ ಮಂಗಳೂರಿಗೆ ಹಿಂತಿರುಗಿದ್ದರು. ಈ ಮಧ್ಯೆ ಮದುಮಗನಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ವರದಿ ಕೈ ಸೇರುವ ಮೊದಲೇ ಅಂದರೆ ಜೂನ್ 30ರಂದು ಯುವಕ ಮೃತಪಟ್ಟಿದ್ದರು. ಬುಧವಾರ ಯುವಕನ ಪರೀಕ್ಷಾ ವರದಿ ಕೈಸೇರಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು ಈಗಾಗಲೇ ಹಲವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸುಮಾರು 70 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಅವರ ಸಂಪರ್ಕದಲ್ಲಿದ್ದ ಮತ್ತಷ್ಟು ಜನರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಯುವಕನಿಗೆ ಸೋಂಕಿನ ಲಕ್ಷಣಗಳು ಇದ್ದರೂ ಅದನ್ನು ಮುಚ್ಚಿಟ್ಟು ಮದುವೆ ಕಾರ್ಯ ನಡೆಸಲಾಗಿದೆ. ಮದುವೆ ಕಾರ್ಯ ನಿಲ್ಲಿಸಿ ಅವರ ಅನಾರೋಗ್ಯದ ಬಗ್ಗೆ ಮೊದಲೇ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕುಳಿಯುವ ಅವಕಾಶವಿತ್ತು. ಆದರೆ ಅನಾರೋಗ್ಯ ಸಮಸ್ಯೆಯನ್ನು ಮರೆಮಾಚಿ ಮದುವೆ ಮಾಡಿಸಿದ್ದು, ಈ ಮೂಲಕ ಇತರರ ಜೀವವನ್ನು ಕೂಡ ಸಂಕಷ್ಟದಲ್ಲಿ ನೂಕಿದ್ದಾರೆ. ಹಾಗಾಗಿ ಮೃತ ಯುವಕನ ಕುಟುಂಬದ ಮೇಲೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅನ್ವಯ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.








