ರೈತ ಸಂಘಟನೆಗಳಲ್ಲೇ ಗೊಂದಲ..!
ಶುಕ್ರವಾರ ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್ ಮಾಡುವುದಿಲ್ಲ
ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ 5 ಸಾವಿರಕ್ಕೂ ಮಿಕ್ಕಿ ರೈತರಿಂದ ಬೃಹತ್ ಪ್ರತಿಭೆನೆ
ಬೆಂಗಳೂರು: ರೈತ ವಿರೋಧಿ ಮಸೂದೆಗಳ ವಿರುದ್ಧ ಬೀದಿಗಿಳಿದಿರುವ ರೈತ ಸಂಘಟನೆಗಳು ಇದೇ ಶುಕ್ರವಾರ ಬದಲು ಸೋಮವಾರ(ಸೆ.28ಕ್ಕೆ) ಕರ್ನಾಟಕ ಬಂದ್‍ಗೆ ಕರೆ ನೀಡಿವೆ.
ಬೆಂಗಳೂರಿನಲ್ಲಿಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.
ಬಂದ್‍ಗೆ 9 ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಉಳಿದ ಸಂಘಟನೆಗಳ ಬೆಂಬಲ ಪಡೆಯುತ್ತೇವೆ. ಹೀಗಾಗಿ ಸಮಯದ ಅಗತ್ಯವಿದೆ. ಬಂದ್ ಮಾಡುವಂತೆ ರೈತ ಸಂಘಟನೆಗಳು ಹಾಗೂ ಬೇರೆ ಬೇರೆ ಸಂಘಟನೆಗಳ ಒತ್ತಡ ಬಂದ ಹಿನ್ನೆಲೆಯಲ್ಲಿ ಸೋಮವಾರ ಕನಾಟಕ ಬಂದ್ ಮಾಡುತ್ತಿದ್ದೇವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಕರ್ನಾಟಕ ಬಂದ್ ತೀರ್ಮಾನಕ್ಕೆ ರಾಜ್ಯ ರೈತ ಸಂಘ, ಪ್ರಾಂತ್ಯ ರೈತ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ಸಂಘ, ದಲಿತ, ಕಾರ್ಮಿಕಪರ ಸಂಘಟನೆಗಳು ಬೆಂಬಲ ನೀಡಿವೆ. ಎಲ್ಲಾ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೋಮವಾರಕ್ಕೆ ಬಂದ್ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಅಖಿಲ ಭಾರತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್ ಮಾಡುವುದಿಲ್ಲ. ಆದರೆ, ಬಂದ್ ಬೆಂಬಲಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ 5 ಸಾವಿರಕ್ಕೂ ಮಿಕ್ಕಿ ರೈತರಿಂದ ಬೃಹತ್ ಪ್ರತಿಭೆನೆಗೆ ತೀರ್ಮಾನ ಮಾಡಲಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ, ಸೋಮವರ ರಾಜ್ಯಾದ್ಯಂತ ಬಂದ್, ಉಗ್ರ ಹೋರಾಟ ನಡೆಸಲಾಗುವುದು ಎಂದು ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.
ಸಂಜೆ 4 ಗಂಟೆಗೆ ರೈತ ಸಂಘಟನೆಗಳ ಐಕ್ಯ ಸಮಿತಿ ಸಭೆ ಇದ್ದು, ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಭೆಯ ನಿರ್ಣಯವನ್ನು ಸುದ್ದಿಗೊಷ್ಠಿಯಲ್ಲಿ ಪ್ರಕಟಿಸಲಾಗುವುದು ಎಂದು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತ ವಿರೋಧಿ ಮಸೂದೆ ಮಂಡನೆ ಮಾಡದೇ ಇದ್ದರೆ ಕರ್ನಾಟಕ ಬಂದ್ ಇರಲ್ಲ. ಶನಿವಾರದವರೆಗೆ ಅಧಿವೇಶನ ನಡೆಯಲಿದೆ. ಅಲ್ಲಿಯವರೆಗೆ ಕಾದು ನೋಡುತ್ತೇವೆ. ಅಷ್ಟರೊಳಗೆ ಮಸೂದೆ ಮಂಡನೆ ಮಾಡ್ತಾರಾ ಇಲ್ಲವಾ ಎಂಬುದರ ಮೇಲೆ ಸೋಮವಾರ ಬಂದ್ ಆಗಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ರೈತ ಸಂಘಟನೆಗಳಲ್ಲೇ ಗೊಂದಲ..!
ಕರ್ನಾಟಕ ಬಂದ್ ವಿಚಾರವಾಗಿ ರೈತ ಸಂಘಟನೆಗಳಲ್ಲೇ ಗೊಂದಲ ಶುರುವಾಗಿದೆ. ನಿನ್ನೆ ಬೆಳಿಗ್ಗೆ ಶುಕ್ರವಾರ ಬಂದ್ ಮಾಡುತ್ತೇವೆ ಎಂದಿದ್ದ ಸಂಘಟನೆಗಳು, ಸಂಜೆ ಹೊತ್ತಿಗೆ ಕರ್ನಾಟಕ ಬಂದ್ ಇಲ್ಲ, ಹೆದ್ದಾರಿ ತಡೆದು ಜೈಲ್ ಭರೋ ಚಳವಳಿ ಮಾಡುತ್ತೇವೆ ಎಂದಿದ್ದವು.
ಆದರೆ, ಇಂದು ಬೆಳಿಗ್ಗೆ ಸಭೆ ಸೇರಿದ ಕೆಲ ಸಂಘಟನೆಗಳು ಶುಕ್ರವಾರ ಅಲ್ಲ, ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದಿವೆ. ಈ ಬಗ್ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರದ ಬಂದ್ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದಿದ್ದಾರೆ. ಹೀಗಾಗಿ ಬಂದ್ ವಿಚಾರವಾಗಿ ಕೆಲ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ. ಇಂದು ಸಂಜೆ ನಡೆಯುವ ಸಭೆಯಲ್ಲಿ ಒಮ್ಮತದ ತೀರ್ಮಾನ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.








