ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ `ರುಪ್ಸಾ’ ದಿಂದ ಜನವರಿ 6ರಂದು ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಕಳೆದ ತಿಂಗಳು ತಮ್ಮ ಬೇಡಿಕೆ ಈಡೇರಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದೆ ರುಪ್ಸಾ ಪ್ರಸ್ತಾಪಿಸಿತ್ತು. ಆದರೆ, ರುಪ್ಸಾದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗ ಶಿಕ್ಷಕರಿಗೆ ವೇತನ ನೀಡಲು 1 ಸಾವಿರ ಕೋಟಿ ಪರಿಹಾರ ನೀಡುವುದು ಅಸಾಧ್ಯ, ಕನಿಷ್ಠ 300 ಕೋಟಿ ಪ್ರಸ್ತಾವವನ್ನೂ ಹಣಕಾಸು ಇಲಾಖೆ ತಿರಸ್ಕರಿಸಿದೆ. ಹೀಗಾಗಿ ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಲು ಆಗುತ್ತಿಲ್ಲ, ವಿಷಾಧಿಸುತ್ತೇನೆ ಎಂದು ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ರುಪ್ಸಾ ಸಂಘ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಹೇಳಿದ್ದರು.
ಇಂದು ಮತ್ತೊಮ್ಮೆ, ಮಾಧ್ಯಮ ಹೇಳಿಕೆ ನೀಡಿರುವ ಲೋಕೇಶ್ ತಾಳಿಕಟ್ಟಿ, ಜ.6ರಂದು ಮೊದಲೇ ನಿರ್ಧರಿಸಿದಂತೆ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.
ಜನವರಿ6ರಂದು ನಡೆಯುವ ಧರಣಿಯಲ್ಲಿ ಸುಮಾರು 8 ಸಾವಿರ ಶಿಕ್ಷಕರು ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮೊದಲು ಮೌರ್ಯವೃತ್ತದಲ್ಲಿ ಸಮಾವೇಶಗೊಂಡು ಫ್ರೀಡಂಪಾರ್ಕ್‍ವರೆಗೆ ಕಾಲ್ನಡಿಗೆ ಮೂಲಕ ತೆರಳಿ ಧರಣಿ ನಡೆಸಲಾಗುವುದು ಎಂದು ತಾಳಿಕಟ್ಟಿ ತಿಳಿಸಿದ್ದಾರೆ.
ಒಂದು ಕಡೆ ಸರ್ಕಾರ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಕ್ಲಾಸ್‍ಗಳನ್ನು ಆರಂಭಿಸಿದೆ. 6ರಿಂದ 9ನೇ ತರಗತಿವರೆಗಿನ ವಿದ್ಯಾಗಮ ಕ್ಲಾಸ್‍ಗಳು ಆರಂಭವಾಗಿವೆ. ಇದರ ನಡುವೆಯೇ ಖಾಸಗಿ ಶಾಲೆಗಳು ಪ್ರತಿಭಟನೆಗೆ ಮುಂದಾಗಿವೆ.
ರುಪ್ಸಾದ ಬೇಡಿಕೆಗಳು..
* ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿರುವ ರುಪ್ಸಾ ವ್ಯಾಪ್ತಿಗೆ ಬರುವ ಶಾಲೆಗಳು ಸೀಟ್‍ಹೌಸ್ ಕಟ್ಟಡಗಳಲ್ಲಿ ನಡೆಯುತ್ತಿವೆ. ಜತೆಗೆ ಕಿಷ್ಕೆಂದೆಯಂತಹ ಕೊಠಡಿಗಳಲ್ಲಿ ನಡೆಯುತ್ತಿರುವ ಕಾರಣ ಸಕ್ಷಮ ಪ್ರಾಧಿಕಾರದಿಂದ ಕಟ್ಟಡಗಳ ಸುರಕ್ಷತಾ ಪ್ರಮಾಣ ಪತ್ರ ನೀಡಬೇಕು
* ಸುರಕ್ಷತಾ ಪ್ರಮಾಣ ಪತ್ರ ಸಲ್ಲಿಸದ ಶಾಲೆಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ಕಳೆದ ತಿಂಗಳು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ವಾಪಸ್ ಪಡೆಯಬೇಕು
* ಕೊರೊನಾದಿಂದ ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರಿಗೆ ವೇತನ ನೀಡಲು 1 ಸಾವಿರ ಕೋಟಿ ಪರಿಹಾರ ನೀಡಬೇಕು
* ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳು 10 ಸಾವಿರ ನೀಡಬೇಕು
* ಅನುದಾನ ರಹಿತ ಶಾಲೆಗಳನ್ನು ಅನುದಾನ ವ್ಯಾಪ್ತಿಗೆ ತರಬೇಕು
* 2020-21ನೇ ಸಾಲಿನ ಆರ್‍ಟಿಇ ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕು
ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ರುಪ್ಸಾ ಸರ್ಕಾರವನ್ನು ಒತ್ತಾಯಿಸಿದೆ. ಈ ಪೈಕಿ 13 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ವೇತನ ಭತ್ಯೆ ನೀಡಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








