ಹೊಸದಿಲ್ಲಿ, ಜೂನ್ 3 : ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಜೂನ್ ತಿಂಗಳಲ್ಲಿ ಕೊರೊನಾ ವೈರಸ್ ನ ಸ್ಥಿತಿಗತಿಗಳನ್ನು ನೋಡಿಕೊಂಡು ಸಿನಿಮಾ ಮಂದಿರ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಚಿವ ಪ್ರಕಾಶ್ ಜಾವದೇಕರ್ ವಿಡಿಯೊ ಕಾನ್ಫರೆನ್ಸ್ ಮೂಲಕ ಚಲನಚಿತ್ರ ನಿರ್ಮಾಪಕರ ಸಂಘ, ಸಿನೆಮಾ ಪ್ರದರ್ಶಕರು ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು. ಸಭೆಯಲ್ಲಿ ಸಚಿವರು ಜೂನ್ ತಿಂಗಳಿನಲ್ಲಿ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿ ಸಿನಿಮಾ ಹಾಲ್ ಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಈ ಮೊದಲು ಚಲನಚಿತ್ರ ರಂಗದ ಪ್ರತಿನಿಧಿಗಳು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಆದ ನಷ್ಟಗಳ ಬಗ್ಗೆ ತಿಳಿಸಿ ಸಿನಿಮಾಹಾಲ್ ತೆರೆಯುವಂತೆ ಮನವಿ ಸಲ್ಲಿಸಿದ್ದರು ಅಲ್ಲದೇ ಚಲನಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಅನೇಕ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು ವೇತನದಲ್ಲಿ ಸಬ್ಸಿಡಿ, 3 ವರ್ಷಗಳವರೆಗೆ ಬಡ್ಡಿರಹಿತ ಸಾಲ, ತೆರಿಗೆ ಮತ್ತು ಸುಂಕ ವಿನಾಯ್ತಿ, ವಿದ್ಯುತ್ ಬಿಲ್ ಕಡಿತ ಮೊದಲಾದ ಬೇಡಿಕೆಯನ್ನು ಮುಂದಿಟ್ಟಿದ್ದರು.







