ರಾಗಿ ಖರೀದಿಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು : ಸಿಎಂ ಭರವಸೆ
ಬೆಂಗಳೂರು: ರಾಗಿ ಖರೀದಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಗಡುವು ಮುಗಿದಿದ್ದು, ರೈತರಿಂದ ರಾಗಿ ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಬುಧವಾರ ವಿಧಾನಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಬೆಳೆದಿರುವ ರಾಗಿ ಖರೀದಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಜೊತೆಗೆ ಅಗತ್ಯವಿರುವ ಹಣಕಾಸು ಒದಗಿಸುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಇದಕ್ಕಾಗಿ ಅಗತ್ಯಬಿದ್ದರೆ 100 ಕೋಟಿ ರೂ. ಮೀಸಲಿಡುವುದಾಗಿ ಹೇಳಿದರು.
ಹಾಗೇ ಪಡಿತರ ಧಾನ್ಯಗಳ ವಿತರಣೆಯಡಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಜೊತೆಗೆ 1 ಕೆ.ಜಿ. ರಾಗಿ ಅಥವಾ ಜೋಳ ನೀಡುವ ಸಂಬಂಧ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದ್ದು, ಇದರನ್ವಯ ಈ ಕುರಿತಂತೆಯೂ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ರಾಗಿ ಬೆಳೆಗಾರರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್ ಹಿರಿಯ ಸದಸ್ಯ ಹೆಚ್.ಡಿ.ರೇವಣ್ಣ, ರಾಗಿ ಬೆಳೆದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಬೆಲೆ ಇಲ್ಲ, ಮಾರಾಟ ಆಗುತ್ತಿಲ್ಲ. ರಾಗಿ ಖರೀದಿ ಕೇಂದ್ರಗಳನ್ನು ತೆರೆಯಿರಿ. ಪಂಜಾಬ್ನಿಂದ ರಾಗಿ ಆಮದು ನಿಲ್ಲಿಸಿ. ನಮ್ಮ ರೈತರೇ ಸಾಕಷ್ಟು ರಾಗಿ ಬೆಳೆದಿದ್ದಾರೆ. ನಮ್ಮ ರೈತರ ಬಳಿಯೇ ರಾಗಿ ಖರೀದಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರವೇ ನೆರವಿಗೆ ಬರಬೇಕಿದೆ. 100 ಕೋಟಿ ರೂ. ಆದರೆ ಸರ್ಕಾರವೇ ಖರೀದಿಸಲಿ ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಸ್ಪೀಕರ್ ಕಾಗೇರಿ ಮಾತನಾಡಿ, ರಾಗಿ ವಿಚಾರ ರೇವಣ್ಣ ಚರ್ಚೆ ಮಾಡಬೇಕು ಅಂತ ಇದ್ದಾರೆ. ರಾಗಿ ಅಂತೂ ಸಿಗಲ್ಲ, ಮುದ್ದೆ ಆದರೂ ಇದೆಯಾ ನೋಡೋಣ ಎಂದರು.